ವಿಶ್ವದ ದೊಡ್ಡಣ್ಣ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ನಡುವಿನ ಫೋನಾಯಣ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬುಧವಾರ ಬೆಳಿಗ್ಗೆ ಒಬಾಮ ಅವರು ಪ್ರಧಾನಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.ಬರಾಕ್ ಒಬಾಮ ಅವರು ಬುಧವಾರ ಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ, ಭಾರತ ಮತ್ತು ಅಮೆರಿಕ ಸಂಬಂಧದ ಕುರಿತು ಚರ್ಚೆ ನಡೆಸಿದ್ದಾರೆ.ಎರಡೂ ದೇಶಗಳೂ ಹಲವಾರು ವಿಷಯಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಒಬಾಮ ಅವರು ಪ್ರಧಾನಿಯವರೊಂದಿಗೆ ಮಾತುಕತೆ ನಡೆಸುತ್ತಾ ತಿಳಿಸಿದ್ದಾರೆ.ಭಾರತ ಮತ್ತು ಅಮೆರಿಕದ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ ಎಂದು ತಿಳಿಸಿರುವ ಒಬಾಮ, ಎರಡೂ ದೇಶಗಳ ನಡುವಿನ ಬಾಂಧವ್ಯ ಬಹಳಷ್ಟು ಮುಖ್ಯವಾಗಿರುವುದಾಗಿ ಸಿಂಗ್‌ಗೆ ತಿಳಿಸಿದ್ದಾರೆ.ಅಲ್ಲದೇ ಬರಾಕ್ ಅವರ ಐತಿಹಾಸಿಕ ಗೆಲುವಿಗೆ ಅಭಿನಂದನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿರುವುದಾಗಿ ಪ್ರಧಾನಮಂತ್ರಿ ಕಚೇರಿ ಮೂಲಗಳು ಹೇಳಿವೆ.ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ ಅವರು ಜಗತ್ತಿನಾದ್ಯಂತ ಹಲವು ಗಣ್ಯರಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಸಹಕಾರ ಕೋರಿದ್ದರು, ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿಲ್ಲ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಮನಮೋಹನ್ ಸಿಂಗ್, ವಿಮಾನ ಪ್ರಯಾಣದಲ್ಲಿದ್ದ ಸಂದರ್ಭದಲ್ಲಿ ಬರಾಕ್ ಅವರು ಕರೆ ಮಾಡಿದ್ದರು, ಆದರೆ ತನಗೆ ಆ ಕರೆಯನ್ನು ಸ್ವೀಕರಿಸಲು ಆಗಿಲ್ಲ ಎಂದು ತಿಳಿಸಿದ್ದರು. |