ಅಪರಿಚಿತ ಶಸ್ತ್ರಾಸ್ತ್ರಧಾರಿ ವ್ಯಕ್ತಿಯೊಬ್ಬ ಗುರುವಾರ ಬೆಳಿಗ್ಗೆ ಇರಾನ್‌ನ ರಾಯಭಾರಿ ಹಾಗೂ ಕಾರಿನ ಚಾಲಕನನ್ನು ಅಪಹರಿಸಿರುವ ಘಟನೆ ಪೇಶಾವರದ ವಾಯುವ್ಯ ಭಾಗದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ರಾಜತಾಂತ್ರಿಕ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಶಸ್ತ್ರಾಸ್ತ್ರಧಾರಿ ವ್ಯಕ್ತಿ ಗುಂಡನ್ನು ಹಾರಿಸಿದ ಪರಿಣಾಮ, ಅವರ ಅಂಗರಕ್ಷಕನೊಬ್ಬ ಸಾವನ್ನಪ್ಪಿದ್ದು, ರಾಯಭಾರಿ ಹಾಗೂ ಕಾರಿನ ಚಾಲಕನನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಪೇಶಾವರದ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್‌ನ ಹಶ್‌ಮತುಲ್ಲಾ ಅತಾರ್ಜಾದ್ ಅವರು ಮನೆಯಿಂದ ಕಚೇರಿಗೆ ತೆರಳುತ್ತಿದ್ದ ಸಂದರ್ಭ ನಗರದ ಹೊರವಲಯದಲ್ಲಿ ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಇರಾನ್ ರಾಯಭಾರಿಯನ್ನು ಅಪಹರಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ, ಆದರೆ ಅಪಹರಣದ ಹೊಣೆಯನ್ನು ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತುಕೊಂಡಿಲ್ಲ. |