ಭ್ರಷ್ಟಾಚಾರದ ಆರೋಪದ ಮೇಲೆ ಸೆರೆಮನೆವಾಸ ಅನುಭವಿಸುತ್ತಿರುವ ತೈವಾನ್‌ನ ಮಾಜಿ ಅಧ್ಯಕ್ಷ ಚೆನ್ ಶುಯ್ ಬಿಯನ್ ಅವರು ಬಂಧನವನ್ನು ವಿರೋಧಿಸಿ ಉಪವಾಸ ಮುಷ್ಕರ ಆರಂಭಿಸಿರುವುದಾಗಿ ಚೆನ್ ವಕೀಲ ಗುರುವಾರ ತಿಳಿಸಿದ್ದಾರೆ.
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಚೆನ್ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದ್ದು, ಅವರು ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಬುಧವಾರವಷ್ಟೇ ಚೆನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಮತ್ತೆ ಸೆರೆಮನೆಗೆ ಒಯ್ಯಲಾಗಿತ್ತು.
ಆದರೆ ಚೆನ್ ವಿರುದ್ಧ ಅಧಿಕೃತವಾಗಿ ಯಾವುದೇ ಆರೋಪವನ್ನು ದಾಖಲಿಸಿಲ್ಲ, ತನ್ನ ಮೇಲಿರುವ ಭ್ರಷ್ಟಾಚಾರ ಆರೋಪಗಳೆಲ್ಲ ಸುಳ್ಳು ಎಂದು ಅವರು ತಿಳಿಸಿದ್ದು, ತನ್ನನ್ನು ನೂತನ ನ್ಯಾಷನಲಿಸ್ಟ್ ಸರ್ಕಾರ ಬಲಿಪಶುವನ್ನಾಗಿ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮಾಜಿ ಅಧ್ಯಕ್ಷ ಚೆನ್ ಅವರು ಮೃತ ನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಗುರುವಾರ ಬೆಳಿಗ್ಗೆ ಜೈಲಿಗೆ ಭೇಟಿ ನೀಡಿದ ಚೆನ್ ವಕೀಲ ಚೆಂಗ್ ವೆನ್ ಲುಗ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |