ಭಾರತೀಯ ಮೂಲದ ಅಮೆರಿಕದ ವಿಜಯ್ ತನೇಜಾ 33ಮಿಲಿಯನ್‌ನಷ್ಟು ಆಸ್ತಿ ಅಡಮಾನದಲ್ಲಿ ಭಾರೀ ವಂಚನೆ ಎಸಗಿದ್ದು, ಪ್ರಕರಣದಲ್ಲಿ ದೋಷಿತರಾಗಿರುವುದಾಗಿ ಎಫ್‌ಬಿಐ(ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಅಧಿಕಾರಿಗಳು ತಿಳಿಸಿದ್ದಾರೆ.
ತನೇಜಾ ಅವರು ಈ ರೀತಿಯಾಗಿ ಅಡಮಾನ ಸಾಲದ ಮೋಸದ ಹಣವನ್ನು ಬಾಲಿವುಡ್‌ನ ವಿವಿಧ ಸಿನಿಮಾಗಳಲ್ಲಿ ತೊಡಗಿಸಿರುವುದಾಗಿ ಎಫ್‌ಬಿಐ ಹೇಳಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಲೆಗ್ಸಾಂಡ್ರಿಯಾ ಜಿಲ್ಲಾ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಜನವರಿ 30ರಂದು ಘೋಷಿಸುವುದಾಗಿ ತೀರ್ಪು ನೀಡಿದೆ.
ಸಾರ್ವಜನಿಕರ ಹಣವನ್ನು ವಂಚನೆ ಮಾಡಿದ ಸಂಚಿನ ಆರೋಪದಲ್ಲಿ ವರ್ಜಿನಿಯಾದ ಫೇರ್‌ಫಾಕ್ಸ್ ನಿವಾಸಿಯಾಗಿರುವ ತನೇಜಾ ಅವರು 20ವರ್ಷಗಳ ಶಿಕ್ಷೆಯೊಂದಿಗೆ 500,000 ದಂಡ ವಿಧಿಸುವ ಸಾಧ್ಯತೆ ಇರುವುದಾಗಿ ಕಾನೂನು ತಜ್ಞರು ವಿವರಿಸಿದ್ದಾರೆ.
47ರ ಹರೆಯದ ತನೇಜಾ ಅವರು ಫೈನಾಶ್ಶಿಯಲ್ ಮೊರ್ಟ್‌ಗೇಜ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ವಾಷಿಂಗ್ಟನ್‌ನಾದ್ಯಂತ ವಸತಿಗೃಹಕ್ಕಾಗಿ ಆಸ್ತಿಯನ್ನು ಮಾರಾಟ ಮಾಡುವ ವಹಿವಾಟು ನಡೆಸುತ್ತಿದ್ದರು.
ಆದರೆ ಈ ಆಸ್ತಿ ವ್ಯವಹಾರ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ವಾಷಿಂಗ್ಟನ್‌ನಲ್ಲಿರುವ ಭಾರತೀಯ ಮೂಲದ ಅಮೆರಿಕನ್‌ರು ವಂಚನೆಗೆ ಒಳಗಾಗಿರುವುದಾಗಿ ಎಫ್‌ಬಿಐ ತಿಳಿಸಿದೆ.
ಆಸ್ತಿಗಾಗಿ ಈ ಸಂಸ್ಥೆಯಲ್ಲಿ ಸಾರ್ವಜನಿಕರು ಹೂಡಿರುವ ಹಣವನ್ನು ತನೇಜಾ ಅವರು ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಫ್‌ಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. |