ರಷ್ಯಾ ಅಧ್ಯಕ್ಷರ ಅಧಿಕಾರವಧಿಯನ್ನು 4 ರಿಂದ 6ವರ್ಷಕ್ಕೆ ವಿಸ್ತರಿಸುವ ನೂತನ ಮಸೂದೆಗೆ ರಷ್ಯಾ ಸಂಸತ್ ಶನಿವಾರ ಅನುಮೋದನೆ ನೀಡುವ ಮೂಲಕ ವ್ಲಾದಿಮಿರ್ ಪುಟಿನ್ ಅವರು ಮತ್ತೆ ಅಧ್ಯಕ್ಷ ಪಟ್ಟಕ್ಕೆ ಮರಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.
ಏತನ್ಮಧ್ಯೆ ಮಾರ್ಚ್‌ನಲ್ಲಿ ರಷ್ಯಾದ ನೂತನ ಅಧ್ಯಕ್ಷರನ್ನಾಗಿ ಡಮಿರ್ಟಿ ಮೆಡ್ವೆಡೆವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಅಧ್ಯಕ್ಷರ ಅಧಿಕಾರವಧಿ ಮುಂದುವರಿಸಿದ್ದರಿಂದ ಪುಟಿನ್ ಪುನರಾಗಮನದಿಂದ ಡಮಿರ್ಟಿ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ.
ನವೆಂಬರ್ 5ರಂದು ಮೆಡ್ವೆಡೆವ್ ಅವರು ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಅಧ್ಯಕ್ಷರ ಅವಧಿಯನ್ನು ಸಂವಿಧಾನಾತ್ಮಕವಾಗಿ ಮತ್ತೆ ಎರಡು ವರ್ಷಗಳ ಕಾಲ ಮುಂದುವರಿಸುವಂತೆ ಪ್ರಸ್ತಾಪ ಸಲ್ಲಿಸಿದ್ದರು.
ಆದರೆ ಈ ನೂತನ ಮಸೂದೆಯನ್ನು ಕಮ್ಯೂನಿಷ್ಟ್ ಪಕ್ಷ ಬಲವಾಗಿ ಆಕ್ಷೇಪಿಸಿದೆ. 450 ಸದಸ್ಯ ಬಲವುಳ್ಳ ಸಂಸತ್ ಕೆಳಮನೆಯಲ್ಲಿನ ಯುನೈಟೆಡ್ ರಷ್ಯಾ ಪಾರ್ಟಿ ಮತ್ತು ವ್ಲಾದಿಮಿರ್ ಜಿರಿನೋವಸ್ಕಿ ಅವರ ಲಿಬರಲ್ ಡೆಮೋಕ್ರಟಿಕ್ ಪಕ್ಷ ಸಹಮತ ವ್ಯಕ್ತಪಡಿಸಿದವು.
ಈ ಬೃಹತ್ ದೇಶದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನಾಲ್ಕು ವರ್ಷಗಳ ಕಾಲ ತುಂಬಾ ಕಡಿಮೆಯಾಗುವುದಾಗಿ ತಿಳಿಸಿದ ಫೈಯರ್ ಬ್ರ್ಯಾಂಡ್ ಎಂದೇ ಹೆಸರು ಗಳಿಸಿದ ಜಿರಿನೋವಸ್ಕಿ, ಅಧ್ಯಕ್ಷರ ಅಧಿಕಾವಧಿಯ ಮುಂದುವರಿಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಅಧ್ಯಕ್ಷರ ಅಧಿಕಾರವಧಿ ವಿಸ್ತರಣೆ ನೂತನ ಮಸೂದೆಗೆ ಶನಿವಾರ ಸಂಸತ್‌ನಲ್ಲಿ ಅನುಮೋದನೆ ದೊರೆತಿದ್ದು, ಇದೀಗ ಮೇಲ್ಮನೆಯಲ್ಲಿ(ಫೆಡರೇಷನ್ ಕೌನ್ಸಿಲ್) ಅಂತಿಮ ಅಂಕಿತ ಬಳಿಕ ಮೆಡ್ವೆಡೆವ್ ಅವರು ಸಹಿ ಹಾಕಲಿದ್ದಾರೆ ಎಂದು ಹೇಳಿದರು.
|