ಕಳೆದ ವರ್ಷ ನಡೆದ ಗ್ಲಾಸ್ಗೋ ವಿಮಾನ ನಿಲ್ದಾಣ ಬಾಂಬ್ ದಾಳಿ ಪ್ರಕರಣದ ಪ್ರಮುಖ ರೂವಾರಿ ಬೆಂಗಳೂರು ಮೂಲದ ಕಫೀಲ್ ಅಹಮ್ಮದ್ ಎಂದು ಆರೋಪಿಸಿರುವ ಮತ್ತೊಬ್ಬ ಶಂಕಿತ ಆರೋಪಿ ಬಿಲಾಲ್, ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾನೆ.
ಲಂಡನ್‌ನ ಗ್ಲಾಸ್ಗೋ ವಿಮಾನ ನಿಲ್ದಾಣಕ್ಕೆ ವಾಹನ ನುಗ್ಗಿಸಿ ಬಾಂಬ್ ಸ್ಫೋಟಿಸಿದ್ದ ಬೆಂಗಳೂರಿನ ಕಫೀಲ್ ಅಹಮ್ಮದ್ ಘಟನೆಯಲ್ಲಿ ಸುಟ್ಟು ಹೋಗಿದ್ದು, ತಿಂಗಳ ಬಳಿಕ ಸಾವನ್ನಪ್ಪಿದ್ದ.
ಇದೀಗ 2007 ಜೂನ್ 30ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ ಸಂದರ್ಭದಲ್ಲಿ ಕಫೀಲ್ ಜತೆ ಇದ್ದ ಇರಾಕ್ ಮೂಲದ ವೈದ್ಯ ಬಿಲಾಲ್ ಅಬ್ದುಲ್ಲಾ ಅಪಾಯದಿಂದ ಪಾರಾಗಿದ್ದ.
ಸಾರ್ವಜನಿಕರ ಅಭಿಪ್ರಾಯವನ್ನು ಬದಲಾಯಿಸುವ ಇರಾದೆ ಹೊಂದಿದ್ದ ಉಗ್ರರು ಕಫೀಲ್ ಮೂಲಕ ಈ ಘಟನೆ ನಡೆಸಿರುವುದಾಗಿ ಅಬ್ದುಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದು, ವಿಮಾನ ನಿಲ್ದಾಣ ಸ್ಫೋಟದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ತಿಳಿಸಿದ್ದಾನೆ.
ಕಫೀಲ್ ಜತೆ ಅಬ್ದುಲ್ಲಾ ಹಾಗೂ ಮತ್ತೊಬ್ಬ ವೈದ್ಯ ಮೊಹಮ್ಮದ್ ಆಶ್ ಕೂಡ ಸ್ಫೋಟ ಸಂಚಿನಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಿ ಬಂಧಿಸಲಾಗಿತ್ತು. ಸ್ಫೋಟ ಸಂದರ್ಭದಲ್ಲಿ ಗಂಭೀರವಾಗಿ ಸುಟ್ಟಗಾಯದಿಂದ ನರಳಿದ ಕಫೀಲ್ ತಿಂಗಳ ನಂತರ ಸಾವನ್ನಪ್ಪಿದ್ದ.
ಕಫೀಲ್ ತನ್ನ ಜೀಪ್‌ನಲ್ಲಿ ಭಾರೀ ಪ್ರಮಾಣದ ಪೆಟ್ರೋಲ್, ಸ್ಫೋಟಕಗಳನ್ನು ಇಟ್ಟುಕೊಂಡಿದ್ದ ಎಂದು ತಿಳಿಸಿದ ಅಬ್ದುಲ್ಲಾ, ಆತ ತನ್ನ ಎದುರೇ ಪೆಟ್ರೋಲ್ ಬಾಂಬ್ ಅನ್ನು ತಯಾರಿಸುತ್ತಿರುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿದ್ದ.
ಅಬ್ದುಲ್ಲಾ ಗ್ಲಾಸ್ಗೋ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ, ಕಫೀಲ್ ಪೆಟ್ರೋಲ್ ಬಾಂಬ್ ತಯಾರಿಸುತ್ತಿದ್ದದ್ದು, ಸ್ಫೋಟ ತಯಾರಿ ಸೇರಿದಂತೆ ಸಂಚಿನ ಕುರಿತು ನ್ಯಾಯಾಲಯಕ್ಕೆ ವಿವರಿಸಿದ್ದು, ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಸಮರ್ಥನೆ ನೀಡಿದ್ದಾನೆ. |