ದಕ್ಷಿಣ ಫಿಲಿಫೈನ್ಸ್‌ನಲ್ಲಿ ನಡೆದ ಸಂಘರ್ಷದಲ್ಲಿ ಮೂವರು ಸೈನಿಕರ ಹಾಗೂ ಎಂಟು ಮಂದಿ ಮುಸ್ಲಿಮ್ ಪ್ರತ್ಯೇಕಾತಾವಾದಿ ದಂಗೆಕೋರರು ಸಾವನ್ನಪ್ಪಿರುವುದಾಗಿ ಮಿಲಿಟರಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮಿಂಡಾನಾವೊ ದ್ವೀಪದ ಮಾಮಸಪನೊ ಪಟ್ಟಣದ ಸಮೀಪ ಪ್ರದೇಶದಲ್ಲಿ ಭಾನುವಾರ ಮೊರೊ ಇಸ್ಲಾಮಿಕ್ ಲಿಬರೆಷನ್ ಫ್ರಂಟ್(ಎಮ್‌ಐಎಲ್‌ಎಫ್)ನ ಬಂಡುಕೋರ ಹಾಗೂ ಸೇನಾಪಡೆ ನಡುವೆ ಘರ್ಷಣೆ ನಡೆದಿರುವುದಾಗಿ ಮೂಲಗಳು ಹೇಳಿವೆ. ಸೇನಾ ಶಿಬಿರದ ಮೇಲೆ ಗೆರಿಲ್ಲಾ ದಾಳಿ ನಡೆಸಿದ ಸಂದರ್ಭ ಈ ಘರ್ಷಣೆ ನಡೆದಿದೆ.
ಸೇನಾ ಶಿಬಿರದಲ್ಲಿ ಭೋಜನ ಮಾಡುತ್ತಿದ್ದ ಸಂದರ್ಭದಲ್ಲಿ ಬಂಡುಕೋರರು ದಾಳಿ ನಡೆಸಿರುವುದಾಗಿ ನಗರ ಮೇಯರ್ ಅಕ್ಮದ್ ಟಾಟೋ ಅಮ್ಪಾಟುನಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಇತ್ತಂಡಗಳ ನಡುವೆ ರಾತ್ರಿ ಇಡೀ ಘರ್ಷಣೆ ನಡೆದಿರುವುದಾಗಿ ಹೇಳಿದರು.
ಸೈನ್ಯವು ನಡೆಸಿದ ಪ್ರತ್ಯಾಕ್ರಮಣದಲ್ಲಿ ಎಂಟು ಎಮ್‌ಐಎಲ್‌ಎಫ್ ಬಂಡುಕೋರರು ಸಾವನ್ನಪ್ಪಿರುವುದಾಗಿ ತಿಳಿಸಿದ ಸ್ಥಳೀಯ ಆರ್ಮಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಜುಲಿಯೆಟೋ ಆಂಡೋ ,ಘಟನೆಯಲ್ಲಿ ಮೂರು ಮಂದಿ ಸೈನಿಕರು ಸಾವನ್ನಪ್ಪಿರುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಎರಡು ಸ್ವಯಂ ಚಾಲಿತ ರೈಫಲ್ಸ್, ಗ್ರೆನೇಡ್ ಲಾಂಚರ್, ಎಂಐಎಲ್ಎಫ್ ಸಮವಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. |