ಥಾಯ್ ಪ್ರಧಾನಮಂತ್ರಿ ಕಚೇರಿಯನ್ನು ಆಕ್ರಮಿಸಲು ಬಂದ ಸರಕಾರಿ ವಿರೋಧಿ ಧೋರಣೆಯ ಪ್ರತಿಭಟನಾಕಾರರ ಮೇಲೆ ಗುರುವಾರ ನಡೆದ ಗ್ರೇನೆಡ್ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, 23ಮಂದಿ ಗಾಯಗೊಂಡಿರುವುದಾಗಿ ಆರ್ಮಿ ಮೂಲಗಳು ತಿಳಿಸಿವೆ.
ಸರಕಾರಿ ವಿರೋಧಿ ಚಳವಳಿಗಾರರ ಮೇಲೆ ಹಲವಾರು ಬಾರಿ ಬಾಂಬ್ ದಾಳಿ ನಡೆದಿದ್ದಾದರೂ, ಗುರುವಾರ ಗವರ್ನ್‌ಮೆಂಟ್ ಹೌಸ್ ಆವರಣದೊಳಗೆ ನಡೆದ ದಾಳಿ ಮಾರಣಾಂತಿಕವಾಗಿತ್ತು ಎಂದು ಅಧಿಕಾರಿಗಳು ಹೇಳಿದರು.
ಪ್ರಧಾನಮಂತ್ರಿ ಕಚೇರಿಯ ಮುಂಭಾಗದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ಪ್ರತಿಭಟನಾಕಾರರಲ್ಲಿ ಓರ್ವನಾಗಿರುವ ಅಮೋರಾನ್ ವಿವರಿಸಿದ್ದಾರೆ.
ನಾನು ಸಂಗೀತವನ್ನು ಆಲಿಸುತ್ತಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಸದ್ದು ಕೇಳಿಸಿತ್ತು, ಕೂಡಲೇ ನಾನು ಓಡತೊಡಗಿದಾಗ ಆಗ ಹಿಂತಿರುಗಿ ನೋಡಿದಾಗ ಹಲವಾರು ಪ್ರತಿಭಟನಾಕಾರರು ಗ್ರೌಂಡ್‌ನಿಂದ ಓಡುತ್ತಿದ್ದರು ಎಂದು ಘಟನೆಯಲ್ಲಿ ಗಾಯಗೊಂಡಿರುವ 42ರ ಹರೆಯದ ವಿಮೋನ್‌ವಾನ್ ತಿಳಿಸಿದ್ದಾರೆ.
ಮಾಜಿ ಪ್ರಧಾನಮಂತ್ರಿ ತಾಕ್ಸಿನ್ ಶಿನಾವಾತ್ರಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದ್ದು, ಇದೀಗ ತಾಕ್ಸಿನ್ ಬೆಂಬಲಿಗರು ಹಾಲಿ ಪ್ರಧಾನಿ ಸೊಮ್‌ಚಾಯ್ ಸರಕಾರದ ವಿರುದ್ಧ ಬಂಡೆದಿದ್ದಾರೆ. ಸೊಮ್‌ಚಾಯ್ ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗಿದ್ದು, ಅವರನ್ನು ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. |