ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಹ್ವಾನವನ್ನು ಒಪ್ಪಿಕೊಂಡಿರುವ ಹಿಲರಿ ಕ್ಲಿಂಟನ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಸಮ್ಮತಿ ಸೂಚಿಸುವ ಮೂಲಕ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವುದಾಗಿ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಶುಕ್ರವಾರದ ವರದಿಯಲ್ಲಿ ಹೇಳಿದೆ.
ಈ ಆಹ್ವಾನ ಕುರಿತಂತೆ ಹಿಲರಿ ಕ್ಲಿಂಟನ್ ಅವರು ಒಮಾಮಾ ಅವರೊಂದಿಗೆ ಮತ್ತಷ್ಟು ಚರ್ಚೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನು ವ್ಯಕ್ತಪಡಿಸಲಿದ್ದಾರೆ ಎಂದು ಕ್ಲಿಂಟನ್ ಅವರ ಇಬ್ಬರು ಆಪ್ತರ ಸಹಾಯಕರು ತಿಳಿಸಿರುವುದಾಗಿ ಟೈಮ್ಸ್ ವರದಿ ವಿವರಿಸಿದೆ.
ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಕ್ಲಿಂಟನ್ ತಯಾರಿರುವುದಾಗಿ ಆಪ್ತಮೂಲವೊಂದು ತಿಳಿಸಿರುವುದಾಗಿ ಟೈಮ್ಸ್ ಹೇಳಿದೆ. ಈಗಾಗಲೇ ಬರಾಕ್ ಒಮಾಮಾ ಅವರು ಹಿಲರಿ ಕ್ಲಿಂಟನ್ ಅವರೇ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತೆ ಆಹ್ವಾನ ನೀಡಿದ್ದರು.
ಬಹುತೇಕವಾಗಿ ಹಿಲರಿ ಕ್ಲಿಂಟನ್ ಅವರು ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಆಯ್ಕೆಗೊಂಡಂತೆಯೇ ಎಂದು ಡೆಮೊಕ್ರಟಿಕ್ ಪಕ್ಷದ ಮೂಲಗಳು ತಿಳಿಸಿದ್ದು, ನವೆಂಬರ್ 27ರ ನಂತರ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಿದೆ. |