ತಮ್ಮದೇ ಕಮ್ಯೂನಿಷ್ಟ್ ಪಕ್ಷದ ಇಬ್ಬರು ಯುವಕರ ಹತ್ಯೆ ಪ್ರಕರಣ ತೀವ್ರ ವಿವಾದ ಹುಟ್ಟು ಹಾಕಿದ್ದು, ಇದೀಗ ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ಆಲಿಯಾಸ್ ಪ್ರಚಂಡ ಅವರು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ತಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಸಿದ್ದ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಒಂದು ದಶಕಗಳ ಕಾಲ ಸಶಸ್ತ್ರ ಹೋರಾಟದ ಮೂಲಕ ನೇಪಾಳದ ಅರೆಸೊತ್ತಿಗೆಯನ್ನು ಕೊನೆಗಾಣಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಮಾವೋವಾದಿ ಮಾಜಿ ನಾಯಕ ಪ್ರಚಂಡ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ನಾನು ಪ್ರಧಾನಿ ಗದ್ದುಗೆಯಿಂದ ಕೆಳಗಿಳಿಯುವ ಮೂಲಕ ಸಮಸ್ಯೆ ಪರಿಹಾರವಾಗುತ್ತೆ ಎಂದಾದರೆ, ತಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಸಿದ್ದ ಎಂದು ಶುಕ್ರವಾರ ತಮ್ಮ ಅಧಿಕೃತ ನಿವಾಸದಲ್ಲಿ ವಿವಾದದ ಕುರಿತು ಪಕ್ಷದ ಸದಸ್ಯರೊಂದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯೂತ್ ಕಮ್ಯೂನಿಷ್ಟ್ ಲೀಗ್(ವೈಸಿಎಲ್)ನ ನಿರ್ಮಲ್ ಪಂತ್ ಹಾಗೂ ಪುಷ್ಕರ್ ದಾಂಗೋಲ್ ಎಂಬಿಬ್ಬರು ಯುವಕರ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಾಗರಿಕ ಸಂಘರ್ಷ ಸಮಿತಿಯ ಸದಸ್ಯ ಈಶ್ವರ್ ಬಿದರೈ ಅವರು ಗುರುವಾರ ಕಾಠ್ಮಂಡು ಬಂದ್‌ಗೆ ಕರೆ ನೀಡಿದ್ದರು.
ಪ್ರಧಾನಿ ಪಟ್ಟದಿಂದ ಕೆಳಗಿಳಿಯಲು ಸಿದ್ದ ಎಂದು ಪ್ರಚಂಡ ಆಹ್ವಾನ ನೀಡಿದ ನಂತರ ಮಾವೋವಾದಿ ಮತ್ತು ನಾಗರಿಕ ಸಂಘರ್ಷ ಸಮಿತಿಯ ಎಂಟು ಮಂದಿ ಸದಸ್ಯರು ಶುಕ್ರವಾರ ಬೆಳಿಗ್ಗೆ ಪ್ರಧಾನಿ ಪ್ರಚಂಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಯೂತ್ ಕಾಮ್ರೇಡ್‌ಗಳಿಬ್ಬರ ಹತ್ಯೆ ಪ್ರಕರಣವನ್ನು ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಸಿ ನ್ಯಾಯಾ ದೊರಕಿಸಿ ಕೊಡುವುದಾಗಿಯೂ ಪ್ರಚಂಡ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. |