ಪಾಕಿಸ್ತಾನದಲ್ಲಿ ಶನಿವಾರ ಬೆಳಿಗ್ಗೆ ಅಮೆರಿಕ ಪಡೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಪಾಕ್ ಮೂಲದ ಬ್ರಿಟನ್ ಪ್ರಜೆ ಅಲ್ ಕೈದಾ ಉಗ್ರಗಾಮಿ ಸಂಘಟನೆಯ ಸದಸ್ಯ ರಶೀದ್ ರೌಫ್ ಹತನಾಗಿರುವುದಾಗಿ ಆಂತರಿಕ ಸಚಿವಾಲಯದ ಮೂಲಗಳು ತಿಳಿಸಿವೆ.
ಅಮೆರಿಕ ಪಡೆ ನಡೆಸಿದ ದಾಳಿಯಲ್ಲಿ ಉಗ್ರ ರೌಫ್ ಸಾವನ್ನಪ್ಪಿರುವ ಬಗ್ಗೆ ನಾವು ಅಧಿಕೃತ ಮಾಹಿತಿಯನ್ನು ಪಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಕ್ಷಿಪಣಿ ದಾಳಿಯಲ್ಲಿ ಅಲ್ ಕೈದಾ ಸಂಘಟನೆಯ ಮತ್ತೊಬ್ಬ ಸದಸ್ಯ ಅಬು ಅಲ್ ಅಸರ್ ಕೂಡ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
2006ರಲ್ಲಿ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ ಬಾಂಬ್ ಸ್ಫೋಟ ಪ್ರಕರಣದ ರೂವಾರಿಯಾಗಿರುವ ರೌಫ್, ಬ್ರಿಟಿಷ್ ಸರಕಾರದ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿದ್ದ. ಅಲ್ಲದೇ 2006ರ ಆಗೋಸ್ಟ್‌ನಲ್ಲಿ ಪಾಕಿಸ್ತಾನದಲ್ಲಿ ಸೆರೆ ಹಿಡಿಯಲಾಗಿತ್ತು, ಆದರೆ 2007ರಲ್ಲಿ ಪೊಲೀಸ್ ಬಂಧನದಿಂದಲೇ ಪರಾರಿಯಾಗಿದ್ದ.
ಉತ್ತರ ವಜಿರಿಸ್ತಾನದ ಅಲಿಖೇಲ್ ಪ್ರದೇಶದಲ್ಲಿ ಅಮೆರಿಕದ ಸ್ಪೈ ವಿಮಾನಗಳು ನಡೆಸಿದ ದಾಳಿಯಲ್ಲಿ ಮೂವರು ವಿದೇಶಿಯರು ಸೇರಿದಂತೆ ಐದು ಮಂದಿ ಬಲಿಯಾಗಿದ್ದು, ಆರು ಮಂದಿ ಗಾಯಗೊಂಡಿರುವುದಾಗಿ ವರದಿಯೊಂದು ತಿಳಿಸಿದೆ.
ಪಾಕಿಸ್ತಾನದ ನೆಲದಲ್ಲಿ ಅಮೆರಿಕ ನಡೆಯುತ್ತಿರುವ ಕ್ಷಿಪಣಿ ದಾಳಿಯನ್ನು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತೀವ್ರವಾಗಿ ಖಂಡಿಸಿದ ಬೆನ್ನಲ್ಲೇ ಇದೀಗ ಮತ್ತೆ ದಾಳಿ ನಡೆಸಿದೆ. |