ಪಾಕಿಸ್ತಾನದ ಲಾಹೋರ್‌ನ ಗಡಾಫಿ ಕ್ರೀಡಾಂಗಣದ ಹೊರ ಆವರಣದಲ್ಲಿರುವ ಪಂಜಾಬಿ ಕಾಂಪ್ಲೆಕ್ಸ್‌ನಲ್ಲಿ ಸರಣಿ ಸ್ಫೋಟ ಸಂಭವಿಸಿ ನಾಲ್ಕು ಮಂದಿಗೆ ಗಾಯಗಳಾಗಿದ್ದು,ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ರಾತ್ರಿ, ಮೊದಲ ಸ್ಫೋಟ 9.05ಕ್ಕೆ ಎರಡನೇ ಸ್ಫೋಟ 9.15ಕ್ಕೆ ಮೂರನೇ ಸ್ಫೋಟ 9.56ಕ್ಕೆ ಸಂಭವಿಸಿದ್ದು, ಉಗ್ರರು ಗ್ರೆನೆಡ್‌ಗಳನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಗ್ರೆನೆಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಂಜಾಬಿ ಕಾಂಪ್ಲೆಕ್ಸ್ ಸಾಂಸ್ಕ್ರತಿಕ ಕೇಂದ್ರವಾಗಿದ್ದು, ಸ್ಫೋಟ ನಡೆದ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅಂತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಪೊಲೀಸರು ಭಾರಿ ಭದ್ರತೆಯನ್ನು ಏರ್ಪಡಿಸಿದರೂ ಕೂಡಾ ಉಗ್ರರು ಗ್ರೆನೆಡ್ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಘಟನಾ ಸ್ಥಳವನ್ನು ಸುತ್ತುವರೆದಿದ್ದು,ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |