ಭಾರತ ಯಶಸ್ವಿಯಾಗಿ ಚಂದ್ರಯಾನ-1 ಚಂದ್ರನನ್ನು ಸ್ಪರ್ಶಿಸಿದ ಬಳಿಕ ಇದೀಗ ಬ್ರಿಟನ್ ಕೂಡ ಚಂದ್ರನತ್ತ ತನ್ನ ಚಿತ್ತ ನೆಟ್ಟಿದ್ದು, ಅದಕ್ಕಾಗಿ ಯೋಜನೆಯೊಂದನ್ನು ರೂಪಿಸಿದೆ.
2012ರಿಂದ 2014 ಮಧ್ಯೆ ತನ್ನ ಚೊಚ್ಚಲ ಮಾನವ ರಹಿತ ಉಪಗ್ರಹವನ್ನು ಕಕ್ಷೆಗೆ ಹಾರಿಬಿಡಲು ಬ್ರಿಟನ್ ಸಜ್ಜುಗೊಂಡಿದೆ. ಮೊದಲ ಯಾನದಲ್ಲೇ ಭಾರತವನ್ನು ಮೀರಿಸಬೇಕೆಂದು ಲೆಕ್ಕಾಚಾರ ಹಾಕಿರುವ ಬ್ರಿಟನ್, ಭಾರತದ ಮೂನ್ ಇಂಪ್ಯಾಕ್ಟ್ ಪ್ರೋಬ್ ರೀತಿಯ ಹಲವಾರು ಪ್ರೋಬ್‌ಗಳನ್ನು ಸರಿಯಲ್ಲಿ ಚಂದ್ರನ ಮೇಲೆ ಬೀಳಿಸಲಿದೆ ಎಂದು ಡೈಲಿ ಟೆಲಿಗ್ರಾಫ್ ಭಾನುವಾರದ ವರದಿ ಬಹಿರಂಗಪಡಿಸಿದೆ.
ವಿಜ್ಞಾನಿಗಳಿಗೆ ಯಕ್ಷಪ್ರಶ್ನೆಯಾಗಿರುವ ಚಂದ್ರ ಗ್ರಹದಲ್ಲಿ ಉಂಟಾಗುವ ಕಂಪನಕ್ಕೆ ಕಾರಣವೇನು ಎಂಬ ಸಂಗತಿಯನ್ನು ಬ್ರಿಟನ್ ಅಧ್ಯಯನ ಮಾಡಲಿದೆ. ಜತೆಗೆ ಚಂದ್ರನ ಶಿಲೆಯ ರಚನೆ ಹಾಗೂ ಮೇಲ್ಮೈಯಲ್ಲಿ ನೀರಿನ ಅಂಶವಿದೆಯೇ ಎಂಬುದನ್ನೂ ಪರಿಶೀಲಿಸಲಿದೆ. ಈ ಚಂದ್ರಯಾನಕ್ಕಾಗಿ ಬ್ರಿಟನ್ 750ಕೋಟಿ ರೂಪಾಯಿ ಖರ್ಚು ಮಾಡಲಿದೆ. |