ಭಯೋತ್ಪಾದನೆ-ವಿರೋಧೀ ಚಟುವಟಿಕೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವಂತಾಗಲು ಪಾಕಿಸ್ತಾನದ ಕುಖ್ಯಾತ ಬೇಹುಚರ ಸಂಸ್ಥೆ ಐಎಸ್ಐಯ ರಾಜಕೀಯ ಘಟಕವನ್ನು ವಿಸರ್ಜಿಸಿರುವುದಾಗಿ ಪಾಕ್ ಸರಕಾರ ಹೇಳಿದೆ.
ಜಾಗತಿಕವಾಗಿ ಅಲ್ ಖಾಯಿದಾದ ಬೆದರಿಕೆ ಮತ್ತು ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪಡೆಗಳ ಮುಂದೊತ್ತುವಿಕೆಯನ್ನು ಸಮರ್ಥವಾಗಿ ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಐಎಸ್ಐ ನಿರ್ದೇಶನಾಲಯದ ಬೆಂಬಲ ಮತ್ತು ಸಹಕಾರ ಅತ್ಯಗತ್ಯವಾಗಿದೆ.
ಆದರೆ, ಐಎಸ್ಐ ರಾಜಕೀಯ ಘಟಕವು 'ಸರಕಾರದೊಳಗಿನ ಸರಕಾರ' ಎಂದು ಟೀಕಾಕಾರರು ಹೇಳುತ್ತಲೇ ಇದ್ದು, ಅದು ತಮ್ಮ ಸರಕಾರಗಳನ್ನು ಉರುಳಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ರಾಜಕೀಯ ಮುಖಂಡರು ಕೂಡ ಆಪಾದಿಸುತ್ತಿದ್ದಾರೆ. ನೆರೆ ರಾಷ್ಟ್ರಗಳಾದ ಅಫ್ಘಾನಿಸ್ತಾನ ಮತ್ತು ಭಾರತವಂತೂ ಅದನ್ನೊಂದು 'ವಿಶ್ವಾಸದ್ರೋಹಿ' ಸಂಘಟನೆ ಎಂದೇ ನಂಬಿವೆ.
ಐಎಸ್ಐ ರಾಜಕೀಯ ಘಟಕವನ್ನು ವಿಸರ್ಜಿಸಲಾಗಿದ್ದು, ಇದೊಂದು ಧನಾತ್ಮಕ ಬೆಳವಣಿಗೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಪ್ರಕಟಿಸಿದ್ದಾರೆ. 'ಐಎಸ್ಐಯು ಅಮೂಲ್ಯವಾದ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಭಯೋತ್ಪಾದನೆ ವಿರೋಧಿ ಕಾರ್ಯಗಳಲ್ಲಿ ಅದು ಪೂರ್ಣವಾಗಿ ತೊಡಗಿಸಿಕೊಳ್ಳಬೇಕಿದೆ' ಎಂದು ಅವರು ಕಾರಣ ನೀಡಿದ್ದಾರೆ. |