ಪತಿಯ ಕಿರುಕುಳದಿಂದ ಪಾರಾಗಲು ಯತ್ನಿಸಿದ ಭಾರತೀಯ ಮೂಲದ ಕೇರಳದ 24ರ ಹರೆಯದ ಪತ್ನಿಯನ್ನು ಪತಿಯೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ. ಅಲ್ಲದೇ ಈ ಸಂದರ್ಭದಲ್ಲಿ ಮತ್ತಿಬ್ಬರಿಗೂ ಗುಂಡು ಹಾರಿಸಿದ್ದು, ಅವರ ಸ್ಥಿತಿ ಗಂಭೀರವಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯನ್ನು 27ರ ಹರೆಯದ ಜೋಸೆಫ್ ಶನೀಷ್ ಪಲ್ಲಿಪುರತ್ ಎಂದು ಗುರುತಿಸಲಾಗಿದೆ. ಪತ್ನಿಯೊಂದಿಗೆ ಜಗಳವಾಡಲು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ನ್ಯೂಜೆರ್ಸಿಗೆ ಬಂದು ಪತ್ನಿ ರೇಷ್ಮಾಜೀಮ್ಮ್ ಮತ್ತು ಇತರರಿಗೆ ಗುಂಡು ಹಾರಿಸಿ ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತನ ಬಳಿ ರಿವಾಲ್ವರ್ ಇರುವುದರಿಂದ ಈಗಲೂ ಆತನಿಂದ ಅಪಾಯವಿರುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ರೇಷ್ಮಾ ಗುಂಡು ತಾಗಿದ ನಾಲ್ಕು ಗಂಟೆಗಳ ಬಳಿಕ ಅಸುನೀಗಿದರೆ, ಡೆನ್ನಿಸ್ ಜಾನ್ ಮಲ್ಲೂಸೆರಿಲ್ (23) ಮತ್ತು ಸಿಲ್ವಿ ಪೆರಿಂಚಿರಿಲ್ (47) ಎಂಬ ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆಂದು ತಿಳಿದುಬಂದಿದೆ. ಪೆರಿಂಚೆರಿಲ್ ರೇಷ್ಮಾ ಸೋದರ ಸಂಬಂಧಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದಾರೆ.
ಕ್ಲಿಪ್ಟನ್‌ನ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಭಾನುವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆ ಜೋಸೆಫ್ ಒಳಕ್ಕೆ ಪ್ರವೇಶಿಸಿ ತನ್ನ ಪತ್ನಿಗೆ, ಒಬ್ಬ ಮಹಿಳೆ ಮತ್ತು ವ್ಯಕ್ತಿಯೊಬ್ಬರ ಮೇಲೆ ಗುಂಡಿಕ್ಕಿದ್ದ. ಇತ್ತೀಚೆಗೆ ತನ್ನ ಪತಿಯನ್ನು ತ್ಯಜಿಸಿದ್ದ ರೇಷ್ಮಾ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದರು. |