ಕೋಸಿ ಅಣೆಕಟ್ಟು ವಿವಾದ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹಾಗೂ ನೇಪಾಳ ಪ್ರಧಾನಿ ಪ್ರಚಂಡ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿರುವುದಾಗಿ ಸಚಿವಾಲಯದ ಮೂಲಗಳು ತಿಳಿಸಿವೆ.
ಮೂರು ದಿನಗಳ ಭೇಟಿಯ ಅಂಗವಾಗಿ ಮುಖರ್ಜಿ ಅವರು ಸೋಮವಾರ ನೇಪಾಳಕ್ಕೆ ಆಗಮಿಸಿದ್ದರು. ಪ್ರಚಂಡ ಅವರನ್ನು ಮುಖರ್ಜಿ ಅವರು ಮೂರನೇ ಬಾರಿಗೆ ಭೇಟಿಯಾಗುತ್ತಿದ್ದು, ದ್ವಿಪಕ್ಷೀಯ ಮಾತುಕತೆಯು ಆಶಾದಾಯಕವಾಗಿರುವುದಾಗಿ ನೇಪಾಳ ಪ್ರಧಾನಮಂತ್ರಿಗಳ ವಿಶೇಷ ಸಲಹೆಗಾರ ಹಿರಾ ಬಹದ್ದೂರ್ ತಾಪಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸುಮಾರು 40ನಿಮಿಷಗಳ ಕಾಲ ಪ್ರಚಂಡ ಹಾಗೂ ಮುಖರ್ಜಿ ಮಾತುಕತೆ ನಡೆಸಿದ್ದು, ನೇಪಾಳದ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿಯೂ ಭಾರತ ನೆರವು ನೀಡಲು ಬದ್ದವಾಗಿರುವುದಾಗಿ ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದ್ದಾರೆಂದು ಹೇಳಿದರು.
ನೇಪಾಳ ಸಂವಿಧಾನದ ನೂತನ ವಿಧಿವಿಧಾನಗಳ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳೂ ಒಮ್ಮತದೊಂದಿಗೆ ಸೇರಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಮುಖರ್ಜಿ ಸಲಹೆ ನೀಡಿದರು.
ಕೋಸಿ ನದಿಯ ಅಣೆಕಟ್ಟು ದುರಸ್ತಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಲಾಯಿತು ಎಂದು ಬಹದ್ದೂರ್ ವಿವರಿಸಿದ್ದು, ಅಣೆಕಟ್ಟು ದುರಸ್ತಿ ಕಾರ್ಯ 2009ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. |