ದಕ್ಷಿಣ ಬ್ರೆಜಿಲ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಸಂಭವಿಸಿದ ಭೂಕುಸಿತಕ್ಕೆ 59 ಮಂದಿ ಬಲಿಯಾಗಿದ್ದು, 43 ಸಾವಿರ ಮಂದಿಯನ್ನು ರಕ್ಷಣಾ ಪಡೆಯ ನೆರವಿನಿಂದ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, ಇಕ್ಕಟ್ಟಿಗೆ ಸಿಲುಕಿದ ಜನರನ್ನು ರಕ್ಷಿಸುವ ಸಲುವಾಗಿ ರಕ್ಷಣಾ ಕಾರ್ಯಕರ್ತರು ಹೆಲಿಕಾಪ್ಟರ್ ಮತ್ತು ಮೋಟಾರ್ ಬೋಟ್‌ಗಳನ್ನು ಉಪಯೋಗಿಸುತ್ತಿದ್ದು, ಸಂತಾ ಕೆಟರಿನಾ ಸ್ಟೇಟ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂತಾ ಕೆಟರಿನಾ ಸ್ಟೇಟ್ ಭಾರೀ ಹವಾಮೂನ ವೈಪರೀತಕ್ಕೆ ಗುರಿಯಾಗಿದೆಯೆಂದು ರಾಜ್ಯಡಾಳಿತದ ಲೂಯಿಸ್ ಹೆನ್ರಿಕ್ಯೂ ಸಿಲ್‌ವೆರಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸರಕಾರವು ಪ್ರವಾಹ ಪೀಡಿತ ಪ್ರದೇಶಗಳಿಗೆ ವೈದ್ಯಕೀಯ ಮತ್ತು ಅಗತ್ಯದ ಆಹಾರ ವಸ್ತುಗಳ ರವಾನೆಗೆ ಸಿದ್ಧವಾಗಿದೆಯೆಂದು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲೂಲಾ ಡಾ ಸಿಲ್ವಾ ಅವರು ಅಧಿಕಾರಿಗಳಿಗೆ ತಿಳಿಸಿರುವುದಾಗಿ ರಾಜ್ಯದ ವೆಬ್‌ಸೈಟ್ ವರದಿ ಹೇಳಿದೆ.
ಭಾರೀ ಮಳೆಯ ಪರಿಣಾಮ ಪ್ರವಾಹ ಮತ್ತು ಭೂ ಕುಸಿತವುಂಟಾಗಿದ್ದು, ಸುಮೂರು 1.5 ಮಿಲಿಯನ್ ಜನರು ತೊಂದರೆ ಅನುಭವಿಸುವಂತಾಗಿದ್ದು, 150,000 ಜನರು ವಿದ್ಯುತ್ತಿಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. 60 ಪಟ್ಟಣಗಳಲ್ಲಿ ಎಂಟು ನಗರಗಳು ಸಂಪೂರ್ಣವಾಗಿ ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿದೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಲು ಸಾಧ್ಯತೆಯಿದ್ದು, ಪ್ರವಾಹದಲ್ಲಿ ಹಲವಾರು ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. |