ನ್ಯೂಜೆರ್ಸಿಯ ಚರ್ಚ್‌ವೊಂದರಲ್ಲಿ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿ ಭಾರತೀಯ ಮೂಲದ ಜೋಸೆಫ್.ಎಂ.ಪಲ್ಲಿಪುರತ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಲ್ಲಿಪುರತ್‌ನನ್ನು ಪೂರ್ವ ಅಟ್ಲಾಂಟದ ಮೊನ್‌ರೊಯಿ ಎಂಬಲ್ಲಿ ಸೋಮವಾರ ರಾತ್ರಿ ಬಂಧಿಸಿರುವುದಾಗಿ ನ್ಯೂಜೆರ್ಸಿಯ ಮಾರ್ಷಲ್ ಜೇಮ್ಸ್ ಪ್ಲೋಸಿಸ್ ಹೇಳಿದ್ದಾರೆ.
ಪತಿಯ ಕಿರುಕುಳದಿಂದ ಪಾರಾಗಲು ಯತ್ನಿಸಿದ ಭಾರತೀಯ ಮೂಲದ ಕೇರಳದ 24ರ ಹರೆಯದ ಪತ್ನಿಯನ್ನು ಜೋಸೆಫ್ ಗುಂಡು ಹಾರಿಸಿ ಹತ್ಯೆಗೈದಿದ್ದ. ಅಲ್ಲದೇ ಈ ಸಂದರ್ಭದಲ್ಲಿ ಮತ್ತಿಬ್ಬರಿಗೂ ಗುಂಡು ಹಾರಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.
27ರ ಹರೆಯದ ಜೋಸೆಫ್ ಶನೀಷ್ ಪಲ್ಲಿಪುರತ್ ಪತ್ನಿಯೊಂದಿಗೆ ಜಗಳವಾಡಲು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ನ್ಯೂಜೆರ್ಸಿಗೆ ಬಂದು ಪತ್ನಿ ರೇಷ್ಮಾ ಮತ್ತು ಇತರರಿಗೆ ಗುಂಡು ಹಾರಿಸಿ ಪರಾರಿಯಾಗಿದ್ದ.
ರೇಷ್ಮಾ ಗುಂಡು ತಾಗಿದ ನಾಲ್ಕು ಗಂಟೆಗಳ ಬಳಿಕ ಅಸುನೀಗಿದರೆ, ಡೆನ್ನಿಸ್ ಜಾನ್ ಮಲ್ಲೂಸೆರಿಲ್ (23) ಮತ್ತು ಸಿಲ್ವಿ ಪೆರಿಂಚಿರಿಲ್ (47) ಎಂಬಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಪೆರಿಂಚೆರಿಲ್ ರೇಷ್ಮಾ ಸೋದರ ಸಂಬಂಧಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದಾರೆ.
ಕ್ಲಿಪ್ಟನ್‌ನ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಭಾನುವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆ ಜೋಸೆಫ್ ಒಳಕ್ಕೆ ಪ್ರವೇಶಿಸಿ ತನ್ನ ಪತ್ನಿಗೆ, ಒಬ್ಬ ಮಹಿಳೆ ಮತ್ತು ವ್ಯಕ್ತಿಯೊಬ್ಬರ ಮೇಲೆ ಗುಂಡಿಕ್ಕಿದ್ದ. ಇತ್ತೀಚೆಗೆ ತನ್ನ ಪತಿಯನ್ನು ತ್ಯಜಿಸಿದ್ದ ರೇಷ್ಮಾ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದರು. |