ಪಾಕಿಸ್ತಾನದ ಮಾಜಿ ಪ್ರಧಾನಿ, ದಿವಂಗತ ಬೆನಜೀರ್ ಭುಟ್ಟೋಗೆ ವಿಶ್ವಸಂಸ್ಥೆಯ ಮಾನವ ಹಕ್ಕು ಮರಣೋತ್ತರ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿಯನ್ನು ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕು ದಿನಾಚರಣೆಯ ಅಂಗವಾಗಿ ಡಿ.10ರಂದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದೆ.ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧ್ಯಕ್ಷ ಮಿಗ್ಯುಯೆಲ್ ಡಿ ಎಸ್‌ಕೋಟೊ ಬ್ರೊಕ್‌ಮನ್ ಅವರು, ಬೆನಜೀರ್ ಅವರನ್ನು ಮರಣೋತ್ತರ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಪತಿ, ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ಸಂದೇಶ ರವಾನಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ಕಳೆದ ಸಾಲಿನ ಡಿಸೆಂಬರ್‌ನಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಆತ್ಮಾಹುತಿ ಬಾಂಬ್ ದಾಳಿ ಮೂಲಕ ಹತ್ಯೆಗೈಯಲಾಗಿತ್ತು. ಆ ಬಳಿಕ ಭುಟ್ಟೋ ಅವರ ಪೀಪಲ್ಸ್ ಪಾರ್ಟಿಗೆ ಜರ್ದಾರಿ ಅವರನ್ನು ಸಹ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.ವಿಶ್ವ ಸಂಸ್ಥೆಯ ಮಾನವ ಹಕ್ಕು ಪ್ರಶಸ್ತಿಯು ಐದು ವರ್ಷಕ್ಕೊಮ್ಮೆ ನೀಡಲಾಗುತ್ತಿದ್ದು, ಪ್ರಜಾಪ್ರಭುತ್ವ ಸರಕಾರಕ್ಕೆ ಪ್ರೋತ್ಸಾಹ ನೀಡಿದ್ದಾಕ್ಕಾಗಿ ಮತ್ತು ಪಾಕಿಸ್ತಾನದ ಮೂಲಭೂತ ಸ್ವಾತಂತ್ರ್ಯಕ್ಕೆ ಹೋರಾಡಿದ್ದಕ್ಕಾಗಿ ಬೆನಜೀರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಯುಎನ್ ಆಯ್ಕೆ ಸಮಿತಿ ಹೇಳಿದೆ.ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹಾಜರಿರುವರು. |