ಗಡಿಯಾಚೆಗಿನ ಭಯೋತ್ಪಾದನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿ ಭಾರತ ಮತ್ತು ಪಾಕಿಸ್ತಾನಗಳು ತಮ್ಮ ನಾಗರಿಕ ತನಿಖಾ ಸಂಸ್ಥೆಗಳ ಸಹಕಾರ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಿರ್ಧರಿಸಿವೆ.
ಭಾರತ ಮತ್ತು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹದ ಜಂಟಿ ಕಾರ್ಯತಂತ್ರದ ಫಲವಾಗಿ ಅನಧಿಕೃತ ವಲಸೆ, ನಕಲಿ ನೋಟು ಚಲಾವಣೆ ಸೇರಿದಂತೆ ಮೊದಲಾದವುಗಳನ್ನು ಹತ್ತಿಕ್ಕಲು ಉಭಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ.
ಸಂಯೋಜಿತ ಮಾತುಕತೆಯ ವೇಳೆ ಮಂಗಳವಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಈ ಪ್ರಸ್ತಾಪವನ್ನಿಟ್ಟಿದ್ದಾರೆ.
ಇದು ಗೃಹ ಕಾರ್ಯದರ್ಶಿಗಳ ಮಟ್ಟದ ಐದನೇ ಸುತ್ತಿನ ಮಾತುಕತೆಯಾಗಿದ್ದು ಭಾರತದ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತ ಮತ್ತು ಪಾಕಿಸ್ತಾನದ ಆಂತರಿಕ ಕಾರ್ಯದರ್ಶಿ ಸೈಯ್ಯದ್ ಕಮಲ್ ಶಾಹ ಇದರಲ್ಲಿ ಪಾಲ್ಗೊಂಡಿದ್ದರು.
ಯಾವುದೇ ಸಾಕ್ಷ್ಯಾಧಾರವಿಲ್ಲದೆ ಒಬ್ಬರನೊಬ್ಬರು ದೂಷಿಸುವುದನ್ನು ಬಿಡಬೇಕೆಂದು ಎರಡೂ ಕಡೆಯಿಂದಲೂ ಪ್ರಥಮ ಬಾರಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. |