ಬ್ಯಾಂಕಾಕ್‌ನ ಪ್ರಮುಖ ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕಾರಿ ವಿರೋಧಿ ಧೋರಣೆಯ ಪ್ರತಿಭಟನಾಕಾರರು ದಿಢೀರನೆ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರ ಪರಿಣಾಮ ಪರಿಸ್ಥಿತಿ ಉದ್ರಿಕ್ತಗೊಂಡಿರುವ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಪ್ರಧಾನಿ ಸೊಮಾಚಿ ವೋಂಗ್‌ಸವಾಜ್ ಗುರುವಾರ ತುರ್ತು ಪರಿಸ್ಥತಿಯನ್ನು ಘೋಷಿಸಿದ್ದಾರೆ.
ಪೀಪಲ್ಸ್ ಅಲೈಯನ್ಸ್ ಫಾರ್ ಡೆಮೋಕ್ರಸಿ(ಪಿಎಡಿ)ಯ ಮುಸುಧಾರಿ ಸದಸ್ಯರುಗಳು ಸುವರ್ಣಭೂಮಿ ಮತ್ತು ಡಾನ್ ಮಾಂಗ್ ವಿಮಾನ ನಿಲ್ದಾಣವನ್ನು ದಿಗ್ಬಂಧನದಲ್ಲಿರಿಸಿದ್ದರ ಪರಿಣಾಮ ಆರ್ಥಿಕ ವಲಯವು ಭಾರಿ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರಿಂದ ಪೊಲೀಸ್ ಮತ್ತು ಸೇನಾ ವಿಭಾಗವು ಇದನ್ನು ತಡೆಯಲಿದೆಯೆಂದು ಥಾಯ್ಲೆಂಡ್ ಪ್ರಧಾನಿ ಸೊಮಾಚಿ ರಾಷ್ಟ್ರವನನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.
ಪಿಎಡಿ ಮುಸುಕುಧಾರಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೊನೆಗೊಳಿಸಲು ನಿರಾಕರಿಸಿದ್ದರ ಪರಿಣಾಮ ಬ್ಯಾಂಕಾಕ್‌ನಿಂದ ಹೊರಡುವ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು, ಇದರ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
'ಯಾವುದೇ ಕಾರಣಕ್ಕೂ ನಾವಿಲ್ಲಿಂದ ಹೋರಾಟವನ್ನು ಅಂತ್ಯಗೊಳಿಸದೆ ತೆರಳುವುದಿಲ್ಲ. ಒಂದು ವೇಳೆ ಪೊಲೀಸರು ಅದಕ್ಕೆ ಮುಂದಾದರೆ ನಾವು ಮೂನವೀಯರಾಗಿ ಹೋರಾಡುವೆವು' ಎಂದು ಪಿಎಡಿ ನಾಯಕನಾದ ಸುರಿಯಾಸೈ ಕಟಸಿಲಾ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಗಾರರ ವಿರುದ್ಧ ಪೊಲೀಸರು ಯಾವ ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಲಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ 30 ವೈದ್ಯರ ತಂಡವನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ.
|