ಭಯೋತ್ಪಾದಕರ ಪೂರ್ವ ಯೋಜಿತ ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಖಚಿತವಾದರೆ ಈಗ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಮಧ್ಯೆಯ ಶಾಂತಿ ಮಾತುಕತೆಗೆ ಧಕ್ಕೆಯಾಗಲಿದೆ ಎಂದು ನ್ಯೂಯಾರ್ಕ್ ಮಾಧ್ಯಗಳ ವರದಿ ತಿಳಿಸಿದೆ.
ಅಣ್ವಸ್ತ್ರ ಸಜ್ಜಿತ ಎರಡು ನೆರೆಯ ರಾಷ್ಟ್ರಗಳ ಸಂಬಂಧ ಹದಗೆಟ್ಟರೆ ಅಮೆರಿಕ ಅದರಲ್ಲೂ ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೇರಲಿರುವ ಬರಾಕ್ ಒಮಾಮ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸಂಬಂಧ ಸುಧಾರಣೆ ಆಗುವುದು ಅಮೆರಿಕದ ಹೊಸ ಅಧ್ಯಕ್ಷರಿಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಅಗತ್ಯವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಮುಂಬೈ ದಾಳಿಯ ಹಿಂದೆ ಯಾರೇ ಇರಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಪರಿಣಾಮ ಬಹಳ ದೊಡ್ಡದು. ಭಾರತದ ವಿರುದ್ಧ ಸೇನಾ ಕಾರ್ಯಾಚರಣೆಗೆ ಸಿದ್ದವಾಗುವುದಕ್ಕಿಂತ ದೇಶದಲ್ಲಿಯ ಭಯೋತ್ಪಾದಕರ ದಮನಕ್ಕೆ ಹೆಚ್ಚಿನ ಗಮನ ಹರಿಸುವುದರ ಬಗ್ಗೆ ಒಬಾಮ ಅವರು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿ ತಿಳಿಸಿದೆ. |