ಈಶಾನ್ಯ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 15 ಕಾರ್ಮಿಕರು ಬಲಿಯಾಗಿದ್ದಾರೆಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಹಿಲಾಂಗ್‌ಜಾಂಗ್ ಪ್ರಾಂತ್ಯದ ಕಿಟಾಹಿ ಪಟ್ಟಣದಲ್ಲಿ ಕಾನೂನು ಬದ್ಧವಾಗಿ ನಡೆಸಿಕೊಂಡು ಬರುತ್ತಿರುವ ಕಲ್ಲಿದ್ದಲು ಗಣಿಯೊಂದರಲ್ಲಿ ಭಾನುವಾರ ಮಧ್ಯಾಹ್ನ ವೇಳೆಗೆ ಸ್ಫೋಟ ಸಂಭವಿಸಿರುವುದಾಗಿ ಕ್ಸಿನ್‌ಹುವಾ ಪತ್ರಿಕಾ ವರದಿ ತಿಳಿಸಿದೆ. ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ನಿಖರವಾದ ಕಾರಣದ ಬಗ್ಗೆ ತನಿಖೆ ನಡೆಸುತ್ತಿರುವದಾಗಿ ಹೇಳಿದೆ.
ಸ್ಫೋಟ ನಡೆಯುವ ವೇಳೆಗೆ 25 ಕೆಲಸಗಾರರು ಗಣಿಯಲ್ಲಿದ್ದು, ಇವರಲ್ಲಿ ಹತ್ತು ಮಂದಿ ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. 15 ಮೃತದೇಹಗಳನ್ನು ಸೋಮವಾರ ಹೊರತೆಗೆಯಲಾಗಿದೆ.
ಚೀನಾದಲ್ಲಿ ಕಳೆದ ವರ್ಷ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ ಅಂದಾಜು 3,800 ಮಂದಿ ಬಲಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. |