ಭಾರತದ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ವರೀತಿಯಲ್ಲೂ ಸಹಕಾರ ನೀಡಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಸೋಮವಾರ ಆಗ್ರಹಿಸಿದ್ದಾರೆ.ಮುಂಬೈ ದಾಳಿಗೆ ಸಂಬಂಧಿಸಿದಂತೆ ಕಾಂಡೋಲಿಸಾ ರೈಸ್ ಅವರು ಡಿ.3ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇದೀಗ ದಾಳಿಗೆ ಸಂಬಂಧಿಸಿದಂತೆ ಪಾಕ್ ಮೇಲೆ ಅಮೆರಿಕದ ಒತ್ತಡ ಹೆಚ್ಚುತ್ತಿದ್ದು, ರೈಸ್ ಹೇಳಿಕೆ ಮತ್ತಷ್ಟು ಪೇಚಿಗೆ ಸಿಲುಕಿಸಿದೆ.ಆರು ಮಂದಿ ಅಮೆರಿಕನ್ನರು ಸೇರಿದಂತೆ ಸುಮಾರು 200ಜನರನ್ನು ಬಲಿ ತೆಗೆದುಕೊಂಡ ಮುಂಬೈ ದಾಳಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಅಮೆರಿಕ ಸ್ಪಷ್ಟವಾಗಿ ಸಂದೇಶ ರವಾನಿಸಿದೆ.ಮುಂಬೈಯಲ್ಲಿ ನಡೆದಿರುವ ಘಟನೆಯ ಹಿಂದೆ ಯಾರ ಕೈವಾಡ ಇದೆ ಎಂಬುದರ ತನಿಖೆಗೆ ಕುರಿತಾಗಿ ಪಾಕ್ ಸರಕಾರ ಸರಿಯಾದ ಸಾಕ್ಷ್ಯಗಳನ್ನು ನೀಡುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಪಾಕ್ ಸರಿಯಾದ ಹಾದಿಯಲ್ಲಿ ಸಾಗಬೇಕಾಗಿದೆ ಎಂದು ಲಂಡನ್‌ಗೆ ಆಗಮಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ವಾಣಿಜ್ಯ ನಗರಿಯ ದಾಳಿಯ ಹಿಂದೆ ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆ ಈ ದುಷ್ಕೃತ್ಯ ಎಸಗಿರುವುದಾಗಿ ಭಾರತ ಈಗಾಗಲೇ ತಿಳಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೇರೆಯಾವುದೇ ವಿಷಯದ ಕುರಿತು ಮಾತನಾಡಲಾರೆ. ಆದರೆ ಈ ವಿಷಯದ ಬಗ್ಗೆ ಒಟ್ಟಾರೆಯಾಗಿ ನಿಷ್ಪಕ್ಷಪಾತದ ಸಹಕಾರವನ್ನು ಪಾಕಿಸ್ತಾನದಿಂದ ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು. |