ಭಾರತದ ಮುಂಬೈ ಮಹಾನಗರಿಯ ಮೇಲೆ ಸದ್ಯದಲ್ಲಿಯೇ ಸಮುದ್ರ ಮಾರ್ಗದ ಮುಖೇನ ಉಗ್ರರು ಒಳನುಸುಳಿ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಅಮೆರಿಕ ಮೊದಲೇ ಎಚ್ಚರಿಕೆ ನೀಡಿತ್ತು ಎಂದು ಸಿಎನ್ಎನ್ ವರದಿ ತಿಳಿಸಿದೆ.
ಮುಂಬೈ ಮೇಲೆ ಪೂರ್ವಯೋಜಿತ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಒಂದು ತಿಂಗಳ ಮೊದಲೇ ಅಮೆರಿಕ ಭಯೋತ್ಪಾದನಾ ನಿಗ್ರಹದ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿರುವುದಾಗಿ ಸಿಎನ್ಎನ್ ವರದಿ ಹೇಳಿದೆ.
ನ.3ರಂದು ವಾಣಿಜ್ಯ ನಗರಿಯ ಪ್ರತಿಷ್ಠಿತ ಸ್ಥಳಗಳಾದ ಹೋಟೆಲ್ ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್ ಮೇಲೆ ಉಗ್ರರು ನಡೆಸಿದ ದಾಳಿಗೆ ವಿದೇಶಿಯರು ಸೇರಿದಂತೆ 200 ಜನರು ಸಾವನ್ನಪ್ಪಿದ್ದರು.
ದಾಳಿಯ ಬಗ್ಗೆ ಅಮೆರಿಕ ನೀಡಿದ ಮುನ್ನೆಚ್ಚರಿಕೆಯ ಸಂದೇಶವನ್ನು ಭಾರತದ ರಕ್ಷಣಾ ಪಡೆ ಸ್ವೀಕರಿಸಿತ್ತು ಎಂದು ವರದಿ ತಿಳಿಸಿದ್ದು, ಅಲ್ಲದೇ ಸಮುದ್ರ ಮಾರ್ಗದ ಮೂಲಕವೇ ಬಂದು ದಾಳಿ ನಡೆಸುತ್ತಾರೆಂಬ ಬಗ್ಗೆ ಎರಡು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆ ಬಳಿಕವಾದರೂ ಹೋಟೆಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರೆ, ಈ ಅನಾಹುತ ತಲೆದೋರುತ್ತಿರಲಿಲ್ಲ, ಆದರೆ ಎಚ್ಚೆತ್ತುಕೊಳ್ಳುವಷ್ಟರಲ್ಲಿಯೇ ಭಾರೀ ಅನಾಹುತ ನಡೆದುಹೋಗಿತ್ತು ಎಂದು ವರದಿ ಹೇಳಿದೆ. |