ನೇಪಾಳ ಮಾವೋವಾದಿ ಸರಕಾರವನ್ನು ಬೆಂಬಲಿಸುವುದರೊಂದಿಗೆ ಉಭಯ ದೇಶಗಳ ಸ್ನೇಹವನ್ನು ಬಲಪಡಿಸುವ ಉದ್ದೇಶದೊಂದಿಗೆ ಚೀನಾವು 100 ಮಿಲಿಯ ಯುಸ್ ಡಾಲರ್‌ನ್ನು ಆರ್ಥಿಕ ನೆರವಾಗಿ ನೀಡುವುದಾಗಿ ಘೋಷಿಸಿದೆ.
ಇತ್ತೀಚೆಗಷ್ಟೇ ನೇಪಾಳಕ್ಕೆ ಭಾರತ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಭೇಟಿ ನೀಡಿದ ಬೆನ್ನಲ್ಲೇ ,ಚೀನಾ ಈ ಬೃಹತ್ ಮೊತ್ತದ ನೆರವನ್ನು ಘೋಷಿಸಿದೆ.
ಮೂರು ದಿನದ ಭೇಟಿಗಾಗಿ ಚೀನಾದ ವಿದೇಶಾಂಗ ಸಚಿವ .ಯಾಂಗ್ ಜಿಯೆಚಿ ಕಾಠ್ಮಂಡುವಿಗೆ ಮಂಗಳವಾರ ಆಗಮಿಸಲಿದ್ದು, ನೇಪಾಳದೊಂದಿಗೆ ಆರ್ಥಿಕ ಮತ್ತು ತಾಂತ್ರಿಕ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಒಪ್ಪಂದದ ವೇಳೆ ಚೀನಾವು 100 ಮಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ನೆರವಾಗಿ ನೀಡಲಿದೆಯೆಂಬ ನಿರೀಕ್ಷೆಯಿದೆಯೆಂದು ನೇಪಾಳ ಪ್ರಧಾನಿ ಪ್ರಚಂಡರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಹಿರಾ ಬಹೂದ್ದೂರ್ ತಾಪ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಮಾವೋವಾದಿ ಸರಕಾರದೊಂದಿಗಿನ ಉಭಯ ಸಂಬಂಧವನ್ನು ಉತ್ತಮಗೊಳಿಸಲು ಚೀನಾವು ಪ್ರಯತ್ನಿಸುತ್ತಿದೆ. ಕಳೆದ ಐದು ದಶಕಗಳ ಕಾಲ ನೇಪಾಳದಲ್ಲಿ ರಾಜರ ಆಳ್ವಿಕೆಯಾಗಿತ್ತು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾವೋವಾದಿ ನೇತೃತ್ವದಲ್ಲಿ ಹೊಸ ಸರಕಾರವು ರೂಪುಗೊಂಡ ಬಳಿಕ ಚೀನಾದ ಸಚಿವರು ನೇಪಾಳಕ್ಕೆ ಇದೇ ಮೊದಲ ಬಾರಿಗೆ ಉನ್ನತ ಮಟ್ಟದ ಭೇಟಿಯನ್ನು ನೀಡುತ್ತಿದ್ದು, ಇದೇ ವೇಳೆ ಚೀನಾ ಸಚಿವರು ನೇಪಾಳ ಪ್ರಧಾನಿ ಪ್ರಚಂಡ, ಅಧ್ಯಕ್ಷ ರಾಮ್ ಬರಾನ್ ಯಾದವ್, ವಿದೇಶಾಂಗ ಸಚಿವ ಉಪೇಂದ್ರ ಯಾದವ್ ಮತ್ತು ಇತರ ಉನ್ನತ ರಾಜಕೀಯ ಅಧಿಕಾರಿಗಳನ್ನು ಚೀನಾಕ್ಕೆ ಆಹ್ವಾನಿಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. |