ಪಾಕಿಸ್ತಾನದಲ್ಲಿ ಭದ್ರವಾಗಿ ನೆಲೆಯೂರಿರುವ 21 ಮಂದಿ ಕುಖ್ಯಾತ ಉಗ್ರರನ್ನು ಭಾರತಕ್ಕೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ಪಾಕ್ ಬಲವಾಗಿ ತಿರಸ್ಕರಿಸಿದ್ದು, ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂಬ ಆರೋಪವನ್ನು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಬುಧವಾರ ತಳ್ಳಿಹಾಕಿದ್ದಾರೆ. ಅಲ್ಲದೆ ಮುಂಬೈಯಲ್ಲಿ ದಾಳಿ ನಡೆಸಿದವರು ಪಾಕಿಸ್ತಾನಿ ಪ್ರಜೆಗಳಲ್ಲ ಮತ್ತು ಭಾರತದ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಮೂಲದ ದೂರದರ್ಶನ ಸಿಎನ್ಎನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕ್ ಕೈವಾಡ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ಅವರು, ಭಾರತದ ಆರೋಪ ನಿರಾಧಾರ ಎಂದು ಹೇಳಿದ್ದರಲ್ಲದೇ, 20ಮಂದಿ ಕುಖ್ಯಾತ ಉಗ್ರರನ್ನು ಹಸ್ತಾಂತರಿಸಬೇಕು ಎಂಬ ಬೇಡಿಕೆಯನ್ನೂ ತಿರಸ್ಕರಿಸಿರುವುದಾಗಿ ಹೇಳಿದ್ದಾರೆ.
ಹಾಗೇನಾದರು ದಾಳಿಯಲ್ಲಿ ಭಾಗಿಯಾದ ಬಗ್ಗೆ ಪುರಾವೆ ಇದ್ದರೆ, ನಾವು ಅದನ್ನು ನಮ್ಮ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುತ್ತೇವೆ ಹಾಗೂ ಆ ಬಗ್ಗೆ ಶಿಕ್ಷೆ ವಿಧಿಸಲು ಪ್ರಯತ್ನಿಸುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ನಿಖರವಾದ ಸಾಕ್ಷ್ಯಾಧಾರಗಳನ್ನು ನೀಡಿದಲ್ಲಿ ನಾವು ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿರುವ ಜರ್ದಾರಿ, ಈ ಸಂದರ್ಭದಲ್ಲಿ ಯಾವುದೇ ತನಿಖೆ, ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಹೆಸರನ್ನಷ್ಟೇ ನೀಡಿದರೆ ಅದನ್ನು ಸಾಕ್ಷಿ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನಿ ಮೂಲದ ಓರ್ವ ಉಗ್ರನನ್ನು ಸಾರ್ವಜನಿಕವಾಗಿಯೇ ಪೊಲೀಸ್ ಅಧಿಕಾರಿಗಳು ಸೆರೆ ಹಿಡಿದಿದ್ದರು. ಈ ನಿಟ್ಟಿನಲ್ಲಿ ನ.26ರಂದು ನಡೆದ ದಾಳಿಯಲ್ಲಿ ಭಾಗಿಯಾದ ಉಗ್ರರು ಸೇರಿದಂತೆ ಸುಮಾರು 21 ಮಂದಿ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕ್ ಬೇಡಿಕೆ ಸಲ್ಲಿಸಿತ್ತು.
ಈ ಪಟ್ಟಿಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ, ಲಷ್ಕರ್ ಇ ತೊಯ್ಬಾದ ಮುಖ್ಯಸ್ಥ ಹಾಫಿಜ್ ಮೊಹಮ್ಮದ್ ಹಾಗೂ ಜೈಶ್ ಇ ಮೊಹಮ್ಮದ್ ವರಿಷ್ಠ ಮಸೂದ್ ಅಜ್‌ಹಾರ್ ಕೂಡ ಸೇರಿದ್ದಾರೆ.
ಆದರೆ ಇದೀಗ ಪಾಕ್ 20ಮಂದಿ ಕುಖ್ಯಾತ ಉಗ್ರರನ್ನು ಹಸ್ತಾಂತರಿಸಲು ಬಲವಾಗಿ ನಿರಾಕರಿಸಿದ್ದಲ್ಲದೇ, ಮುಂಬೈ ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂಬುದಾಗಿಯೇ ವಾದಿಸತೊಡಗಿದೆ. |