ಚುನಾವಣೆಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಪಕ್ಷವನ್ನು ಥಾಯ್ಲೆಂಡ್ ನ್ಯಾಯಾಲಯವು ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಸರಕಾರಿ ವಿರೋಧಿ ಪ್ರತಿಭಟನಾಕಾರರು ಥಾಯ್ ವಿಮಾನ ನಿಲ್ದಾಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿರುವುದಾಗಿ ತಿಳಿಸಿದ್ದಾರೆ.
ನಿಷೇಧಕ್ಕೆ ಒಳಗಾದ ಆಡಳಿತ ಪಕ್ಷವಾದ ಪೀಪಲ್ ಪವರ್ ಪಾರ್ಟಿಯ ನಾಯಕರು ನೂತನ ಪಕ್ಷವನ್ನು ರಚಿಸಿ ಮತ್ತೆ ಆಡಳಿತ ಗದ್ದುಗೆಯನ್ನು ಏರುವುದಾಗಿ ಘೋಷಿಸಿವೆ. ಏತನ್ಮಧ್ಯೆ ಸರಕಾರಿ ವಿರೋಧಿ ಚಳವಳಿಗಾರರು ಯಾವುದೇ ಬೆಲೆ ತೆತ್ತಾದರೂ ಇದನ್ನು ತಡೆಯುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗಾರರು ಕಳೆದ ಮೂರು ತಿಂಗಳಿನಿಂದ ಪ್ರಧಾನಿ ಕಾರ್ಯಾಲಯವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು, ಇದೀಗ ಬುಧವಾರ ಬೆಳಿಗ್ಗಿನಿಂದ ಎಲ್ಲಾ ತಡೆಯನ್ನು ತೆರವುಗೊಳಿಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸರಕಾರವು ಉಪ ಪ್ರಧಾನಿಯಾದ ಚವೊರತ್ ಚನ್‌ವಿರ್‌ಕುಲ್ ಅವರನ್ನು ಉಸ್ತುವಾರಿ ಪ್ರಧಾನಿಯಾಗಿ ನಿಯೋಜಿಸಿದೆ. ಥಾಯ್ಲೆಂಡ್‌ಗಾಗಿ ಪಾರ್ಟಿಎಂಬ ಹೆಸರಿನಲ್ಲಿ ಪಕ್ಷವನ್ನು ಪುನಃ ನಿರ್ಮಿಸಲಾಗುವುದು ಮತ್ತು ಹೊಸ ಪ್ರಧಾನಿಯ ಆಯ್ಕೆಗಾಗಿ ಸಂಸತ್ ಅಧಿವೇಶನವನ್ನು ಕರೆಯಲಾಗುವುದೆಂದು ಸೊಮಾಚಿ ಪಕ್ಷದ ಅಧಿಕಾರಿಗಳು ತಿಳಿಸಿದರು. |