ವಾಣಿಜ್ಯ ನಗರಿ ಮುಂಬೈ ಮೇಲೆ ಕಳೆದ ವಾರ ನಡೆದ ದಾಳಿಯ ಹಿಂದೆ ಲಷ್ಕರ್ ಇ ತೊಯ್ಬಾ ಕೈವಾಡ ಇರುವುದಾಗಿ ಅಮೆರಿಕದ ನ್ಯಾಷನಲ್ ಇಂಟೆಲಿಜೆನ್ಸ್‌ನ ನಿರ್ದೇಶಕ ಮೈಕ್ ಮೆಕ್‌ಕೊನ್ನೆಲ್ ಅವರು ಆರೋಪಿಸಿದ್ದಾರೆ.
ನ.26ರಂದು ನಡೆದ ದಾಳಿಯ ಹಿಂದೆ ಲಷ್ಕರ್ ಕೈವಾಡ ಇರುವಂತೆಯೇ, 2006ರಲ್ಲಿ ನಡೆದ ರೈಲು ಸ್ಫೋಟಗಳ ಹಿಂದೆಯೂ ಇದೇ ಸಂಘಟನೆಗಳು ಕಾರಣವಾಗಿವೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ಮೆಕ್‌ಕೊನ್ನೆಲ್ ಅವರು ಲಷ್ಕರ್ ಇ ತೊಯ್ಬಾದ ಹೆಸರನ್ನು ಉಲ್ಲೇಖಿಸದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಸಂಘಟನೆ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದು, 2001ರಲ್ಲಿ ಸಂಸತ್ ಮೇಲೂ ದಾಳಿ ನಡೆಸುವ ಮೂಲಕ ತಮ್ಮ ಪಾಶವೀ ಕೃತ್ಯವನ್ನು ಮುಂದುವರಿಸಿರುವುದಾಗಿ ಹೇಳಿದರು.
ಮುಂಬೈ ಮೇಲಿನ ದಾಳಿಯ ಬಳಿಕ ಇದೀಗ ಮೊತ್ತ ಮೊದಲ ಬಾರಿಗೆ ಅಮೆರಿಕ ಸಾರ್ವಜನಿಕವಾಗಿಯೇ ಭಯೋತ್ಪಾದಕ ಸಂಘಟನೆಗಳತ್ತ ಕೈ ಬೆರಳೆತ್ತಿ ತೋರಿಸತೊಡಗಿದೆ.
ಮುಂಬೈಯಲ್ಲಿನ ಪ್ರಮುಖ ಹೋಟೆಲ್ ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಸಮುದ್ರ ಮಾರ್ಗದ ಮೂಲಕ ಉಗ್ರರು ಆಗಮಿಸಿ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಅಕ್ಟೋಬರ್ ತಿಂಗಳಿನಲ್ಲಿಯೇ ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿರುವುದಾಗಿ ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.
ಈ ಕುರಿತು ನವೆಂಬರ್ 18ರಂದು ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸಿರುವುದಾಗಿಯೂ ಎಬಿಸಿ ನ್ಯೂಸ್ ವರದಿ ಹೇಳಿದೆ.
ಸುಮಾರು ಹತ್ತು ಮಂದಿ ಉಗ್ರರು ಸಮುದ್ರ ಮಾರ್ಗದಿಂದ ರಬ್ಬರ್ ಡಿಂಗಿ(ಬೋಟ್)ಯ ಮೂಲಕ ಮುಂಬೈಗೆ ಆಗಮಿಸಿ,ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳಲ್ಲಿ ನಡೆಸಿದ ದಾಳಿಯಿಂದಾಗಿ 22ಮಂದಿ ವಿದೇಶಿಯರು ಸೇರಿದಂತೆ 188 ಜನರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
|