ಕಳೆದ ವಾರ ಮುಂಬೈಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಅವರು, ಭಯೋತ್ಪಾದನೆ ವಿರುದ್ಧ ಪಾಕ್ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.
ಮುಂಬೈ ದಾಳಿಯ ಹಿನ್ನೆಲೆಯಲ್ಲಿ ರೈಸ್ ಅವರು ಬುಧವಾರ ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ, ಇದೀಗ ಇಸ್ಲಾಮಾಬಾದ್‌ಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡುತ್ತಿರುವ ಅವರು, ಭಯೋತ್ಪಾಕರನ್ನು ಮಟ್ಟ ಹಾಕುವಲ್ಲಿ ಪಾಕ್ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಭಯೋತ್ಪಾದಕರ ಬೆದರಿಕೆ ಜಾಗತಿಕವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಉಗ್ರರ ಧಮನಕ್ಕೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಕ್ ಜೊತೆ ಮಾತುಕತೆ ನಡೆಸುವ ಸಲುವಾಗಿ ಅಲ್ಲಿಗೆ ತೆರಳುತ್ತಿರುವುದಾಗಿ ರೈಸ್ ಅವರು ಭಾರತದಿಂದ ಪಾಕ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮುಂಬೈಯ ದಾಳಿಯ ಹಿಂದೆ ಪಾಕಿಸ್ತಾನಿ ಮೂಲದ ಭಯೋತ್ಪಾದಕರ ಸಂಘಟನೆಗಳ ಕೈವಾಡ ಇರುವುದಾಗಿ ಭಾರತ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಭಾರತದ ಆರೋಪ ನಿರಾಧಾರ ಎಂದು ಪಾಕ್ ಪ್ರತಿಕ್ರಿಯೆ ನೀಡಿದೆ.
ರೈಸ್ ಅವರು ಮುಂಬೈ ದಾಳಿ ಹಾಗೂ ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರೊಂದಿಗೆ ಚರ್ಚಿಸಿದ ಬಳಿಕ, ರಾವಲ್ಪಿಂಡಿಯಲ್ಲಿರುವ ಆರ್ಮಿ ಜನರಲ್ ಅಶ್ಫಾಕ್ ಕಯಾನಿ ಅವರ ಜತೆಯಲ್ಲಿಯೂ ಮಾತುಕತೆ ನಡೆಸಲಿದ್ದಾರೆ. |