ಅಪರಾಧ ಮಾಡಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಬೇಕಿದ್ದರೆ ಭಾರತದಲ್ಲಾದರೆ ಹೈಕೋರ್ಟ್, ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗುತ್ತದೆ, ಆದರೆ ಅಮೆರಿಕದ ಮಿಲ್‌ವಾವ್‌ಕೀ ಕೌಂಟಿಯ ಜೈಲಿನಲ್ಲಿರುವ ಕೈದಿಗಳು ಆಸ್ಪತ್ರೆಯಲ್ಲಿರುವ ರೋಗಿಗಳ ಶುಶ್ರೂಷೆ, ರಕ್ತ ಒರೆಸುವುದು, ಮುಖ ಸ್ವಚ್ಚ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡರೆ ಶಿಕ್ಷೆಯ ಪ್ರಮಾಣ ಕಡಿತ ಮಾಡುವ ಅವಕಾಶವೊಂದನ್ನು ನ್ಯಾಯಾಧೀಶರು ಒದಗಿಸಿಕೊಟ್ಟಿದ್ದಾರೆ.
ಮಿಲ್‌ವಾವ್‌ಕೀ ಕೌಂಟಿ ಅಮೆರಿಕದ ಒಂದು ಭಾಗ, ಅದು ಯುನೈಟೆಡ್ ನೇಶನ್ಸ್‌ನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 22ನೇ ದೊಡ್ಡ ನಗರವಾಗಿದೆ. ಇದು ಸಾಂಸ್ಕೃತಿಕ ಮತ್ತು ಆರ್ಥಿಕ ನಗರಿಯಾಗಿದೆ. ಅಲ್ಲದೇ ಮಿಲ್‌ವಾವ್‌ಕೀ ಹತ್ತು ಪ್ರಮುಖ ಡೆಂಜರಸ್ ನಗರಗಳಲ್ಲಿ ಒಂದಾಗಿದೆ !
ಹಲವು ಕೈದಿಗಳು ಈ ಸೇವೆಯನ್ನು ಮಾಡುತ್ತಾರೆ ಎಂದೆನ್ನುವ ಷೆರೀಫ್ ಡೇವಿಡ್ ಕ್ಲರ್ಕ್, ಅದಕ್ಕಾಗಿಯೇ ಅವರಿಗೆ ಗಂಟೆಗೆ 30ಡಾಲರ್ ಹಣವನ್ನು ಸಂದಾಯ ಮಾಡಲಾಗುತ್ತದೆಯಂತೆ. ಕೆಲವರು ಸ್ವಯಂ ಇಚ್ಛೆಯಿಂದ ಶುಶ್ರೂಷೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರಂತೆ.
ಇದೇನು ಹೃದಯ ಶಸ್ತ್ರಚಿಕಿತ್ಸೆಯಂತಹ ಕೆಲಸವಲ್ಲ, ಇದೊಂದು ಸೇವಾಮನೋಭಾವ, ಆ ಕಾರಣಕ್ಕಾಗಿ ಏಡ್ಸ್ ಮತ್ತು ಹೆಪಟೈಟೀಸ್ ರೋಗಿಗಳ ಶುಶ್ರೂಷೆ ಮಾಡುವುದಕ್ಕಾಗಿಯೂ ತರಬೇತಿ ನೀಡಲಾಗುತ್ತದಂತೆ.
ಮೋಸ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ 33ರ ಹರೆಯದ ಮ್ಯಾಕ್ಸಿ ಕ್ಯಾಬ್ ಚಾಲಕ ವೆಸ್ಟ್ ಅಲ್ಲಿಸ್ ಕೈದಿ, ಶಿಕ್ಷೆಯ ಕಡಿತಕ್ಕಾಗಿ ಸುಮಾರು 13ದಿನಗಳ ಕಾಲ ಸೇವೆ ಮಾಡಿದ್ದಾನಂತೆ. ಗ್ರೀನ್‌ಫೀಲ್ಡ್‌ನ 29ರ ಹರೆಯದ ಮತ್ತೊಬ್ಬ ಕೈದಿ ಕೂಡ 11ದಿನಗಳ ಕಾಲ ಕೆಲಸ ನಿರ್ವಹಿಸಿದ್ದ.
ಹೀಗೆ ಸೇವೆಯನ್ನು ಮಾಡಿ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿಕೊಳ್ಳಲು ಕೌಂಟಿಯ ನ್ಯಾಯಾಧೀಶರು ಹಾಗೂ ಜೈಲಿನ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ.
ಅದೆಲ್ಲಾ ಸರಿ ಮಿಲ್‌ವಾವ್‌ಕೀ ಕೌಂಟಿಯಲ್ಲಿ ಕೈದಿಗಳು ಶುಶ್ರೂಷೆ ಮಾಡುವ ಮೂಲಕ ಶಿಕ್ಷೆಯ ಪ್ರಮಾಣವನ್ನೆನೋ ಕಡಿಮೆ ಮಾಡಿಕೊಳ್ಳುತ್ತಾರೆ, ಭಾರತದಲ್ಲಿ ಇಂತಹ ಅವಕಾಶ ಕೊಟ್ಟರೆ ಕೈದಿ ಅಲ್ಲಿಂದಲೇ ಪರಾರಿಯಾದರೆ ಏನು ಮಾಡುವುದು? |