ಭಾರತದ ವಿದೇಶಾಂಗ ಸಚಿವರ ಹೆಸರಿನಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ನವೆಂಬರ್ 28ರಂದು ಬೆದರಿಸುವ ರೀತಿಯಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿದ ಹಿನ್ನೆಲೆಯಲ್ಲಿ, ಅಣ್ವಸ್ತ್ರ-ಶಕ್ತ ರಾಷ್ಟ್ರ ಪಾಕಿಸ್ತಾನದ ಆದ್ಯಂತವಾಗಿ ಕಟ್ಟೆಚ್ಚರ ಘೋಷಿಸಲಾಗಿತ್ತು ಮತ್ತು ಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿತ್ತು ಎಂದು 'ಡಾನ್' ಪತ್ರಿಕೆ ಶನಿವಾರ ವರದಿ ಮಾಡಿದೆ.
ಮುಂಬಯಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದ್ದು, ನಂತರದ 24 ಗಂಟೆಗಳ ಕಾಲ ಪಾಕಿಸ್ತಾನ ಸೇನೆಯು ಭಾರತದ ಯಾವುದೇ ಆಕ್ರಮಣ ಎದುರಿಸಲು ಕಟ್ಟೆಚ್ಚರದ ಸನ್ನದ್ಧ ಸ್ಥಿತಿಯಲ್ಲಿತ್ತು ಎಂಬುದನ್ನು ರಾಜತಾಂತ್ರಿಕ ಅಧಿಕಾರಿಯೊಬ್ಬರು ಕೂಡ ದೃಢಪಡಿಸಿದ್ದಾರೆ.
ಭಾರತದ ವಿದೇಶಾಂಗ ಸಚಿ ಪ್ರಣಬ್ ಮುಖರ್ಜಿ ಎಂದು ಕರೆದುಕೊಂಡ ವ್ಯಕ್ತಿಯು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರಿಗೂ ಕರೆ ಮಾಡಲು ಪ್ರಯತ್ನಿಸಿದ್ದ. ಆದರೆ ಆಕೆಯ ಭದ್ರತೆಯಿಂದಾಗಿ ಇದು ಸಾಧ್ಯವಾಗಿರಲಿಲ್ಲ ಎಂದು ಡಾನ್ ವರದಿ ಮಾಡಿದೆ.
ಈ ಘಟನೆಯು ದೇಶ-ವಿದೇಶದ ರಾಜತಾಂತ್ರಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಭಾರತ-ಪಾಕಿಸ್ತಾನ ನಡುವೆ ಆಕಸ್ಮಿಕ ಯುದ್ಧವೇ ನಡೆಯಬಹುದೆಂಬ ಆತಂಕವೂ ವ್ಯಕ್ತವಾಗಿತ್ತು ಎಂದು ಡಾನ್ ಪತ್ರಿಕೆಯು ಹಲವು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದೀಗ ಯಾರು ಕರೆ ಮಾಡಿದ್ದು ಎಂಬುದರ ಕುರಿತು ಎರಡೂ ದೇಶಗಳ ಮೂಲಕ ತನಿಖೆ ನಡೆಯುತ್ತಿದೆ. ಆದರೆ ಭಾರತದಿಂದ ಕರೆ ಬಂದಿತ್ತೇ ಅಥವಾ ಪಾಕಿಸ್ತಾನದಿಂದಲೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದೂ ಪತ್ರಿಕೆ ತಿಳಿಸಿದೆ.
ಆದರೆ ಕಾಲರ್ ಐಡಿ ಪರಿಶೀಲಿಸಿದಾಗ ಇದು ದೆಹಲಿಯ ನಂಬರ್ ಆಗಿತ್ತು ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಟೆಲಿಫೋನ್ ನಂಬರ್ ಕೂಡ ನಕಲಿಯಾಗಿದ್ದಿರಬಹುದು. ನಂಬರ್ ಬದಲಿಸುವ ತಂತ್ರಜ್ಞಾನವೂ ಬಂದಿದೆ ಎಂಬುದು ಭಾರತೀಯ ಅಧಿಕಾರಿಗಳ ವಾದ. |