ತಾಲಿಬಾನ್ ಮತ್ತು ಅಲ್-ಕೈದಾ ಭಯೋತ್ಪಾದನಾ ಉಗ್ರಗಾಮಿ ಸಂಘಟನೆಗಳ ವಿರುದ್ಧ ಹೋರಾಡಲು ಅಮೆರಿಕ ಸೇನೆಯು ಮುಂದಿನ ವರ್ಷ 20,000 ಹೆಚ್ಚುವರಿ ಸೇನಾ ಪಡೆಗಳನ್ನು ಅಫ್ಘಾನ್‌ಗೆ ರವಾನಿಸಲಿದೆಯೆಂದು ಅಮೆರಿಕ ಸೈನ್ಯದ ವರಿಷ್ಠ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಸೈನ್ಯದ ಮೊದಲ ಹೆಚ್ಚುವರಿ ಪಡೆಯು ಜನವರಿಯಲ್ಲಿ ಅಫ್ಘಾನ್‌ಗೆ ರವಾನಿಸಲಾಗುವುದು ಎಂದು ಅಫ್ಘಾನ್‌ನ ಅಮೆರಿಕ ಪಡೆಯ ಉಪಸೈನ್ಯಧಿಕಾರಿ ಮೇಜರ್ ಜನರಲ್ ಮೈಕಲ್ ಟಕ್ಕರ್ ತಿಳಿಸಿದರು. ಚಳಿಗಾಲದಲ್ಲಿ ಹಲವು ತೊಡುಕುಗಳು ಉಂಟಾಗುವುದರಿಂದ ಉಗ್ರರ ವಿರುದ್ಧ ಹೋರಾಟದಲ್ಲಿ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದು, ಇದನ್ನು ನಿವಾರಿಸಲು ಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ಹೇಳಿದರು.
ಇರಾಕ್ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿದ್ದರಿಂದ ಅಲ್ಲಿನ ಅಮೆರಿಕ ಪಡೆಯ ಸೈನಿಕರನ್ನು ಅಫ್ಘಾನ್‌ಗೆ ರವಾನಿಸಲಾಗುವುದು ಎಂದು ಪೆಟಾಂಗಾನ್ ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅಫ್ಘಾನಿಸ್ಥಾನದಲ್ಲಿ ಹಿಂಸಾಚಾರವು ಪ್ರಬಲವಾದ ಪರಿಣಾಮ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಇರಾಕ್‌ನಿಂದ ಸೈನ್ಯವನ್ನು ಅಫ್ಘಾನ್‌ಗೆ ಕಳುಹಿಸುವುದಾಗಿ ಘೋಷಿಸಿದ್ದರು.
ಅಫ್ಘಾನ್‌ನಲ್ಲಿ ಈಗಾಗಲೇ 30,000 ಅಮೆರಿಕ ಸೈನಿಕರಿದ್ದು, ಇದರಲ್ಲಿ ಅರ್ಧದಷ್ಟು ಸೈನಿಕರು ನ್ಯಾಟೋದ ಅಧೀನತೆಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. |