ಜಿಂಬಾಬ್ವೆಯಲ್ಲಿ ಮಾರಣಾಂತಿಕವಾಗಿ ಹರಡುತ್ತಿರುವ ಕಾಲರಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದವರ ಸಂಖ್ಯೆ 575ಕ್ಕೆ ಏರಿದ್ದು, 12,700 ಮಂದಿಗೆ ರೋಗದಿಂದ ನರಳುತ್ತಿದ್ದಾರೆಂದು ವಿಶ್ವಸಂಸ್ಥೆಯ ಅಂಕಿ-ಅಂಶದ ವರದಿ ತಿಳಿಸಿದೆ.
ರಾಜಧಾನಿ ಹರಾರೆಯಲ್ಲಿ ರೋಗವು ವಿನಾಶಕಾರಿಯಾಗಿ ಭಾದಿಸಿದ್ದು, ಅಲ್ಲಿ ಇದುವರೆಗೆ 179 ಮಂದಿ ಬಲಿಯಾಗಿದ್ದು, 6,448 ಮಂದಿ ರೋಗಕ್ಕೆ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರ ಕಚೇರಿಯ ಪ್ರಕಟಣೆ ಹೇಳಿದೆ.
ಮಾರಣಾಂತಿಕವಾಗಿ ಹರಡುತ್ತಿರುವ ರೋಗವನ್ನು ತಡೆಗಟ್ಟುವಲ್ಲಿ ಆರೋಗ್ಯ ಕ್ಷೇತ್ರವು ಸಂಪೂರ್ಣವಾಗಿ ವಿಫಲವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ವೈದ್ಯರುಗಳ, ದಾದಿಯರ ಮತ್ತು ನುರಿತ ತಜ್ಞರ ಅಲಭ್ಯತೆಯು ಕಾಡುತ್ತಿದೆಯೆಂದು ಒಸಿಎಚ್‌ಎ ವಕ್ತಾರೆಯಾದ ಎಲಿಜಬೆತ್ ವಿವರಿಸಿದ್ದಾರೆ.
ಸರಿಯಾಗಿ ಸಂಬಂಳ ನೀಡಲಿಲ್ಲ ಎಂಬ ಕಾರಣಕ್ಕೆ ಅನೇಕ ವೈದ್ಯರುಗಳು ಮುಷ್ಕರವನ್ನು ಹೂಡಿದ್ದು ಮತ್ತು ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ಪರಿತ್ಯಜಿಸಿದ್ದು ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿರುವುದಾಗಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |