ಪಾಕಿಸ್ತಾನವನ್ನು ತೆಗಳುವ ಮೊದಲು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್ ಭಾಗಿದಾರಿಕೆಯನ್ನು ಭಾರತ ಅರ್ಥಮಾಡಿಕೊಳ್ಳಬೇಕು ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಎರಡು ದೇಶಗಳು ಸಹಕರಿಸಿ ಕಾರ್ಯ ನಿರ್ವಹಿಸುವ ಅಗತ್ಯವಿದೆಯೆಂದು ಮಾಜಿ ಪಾಕ್ ಅಧ್ಯಕ್ಷ ನಿವೃತ್ತ ಜನರಲ್ ಪರ್ವೇಜ್ ಮುಶ್ರರಫ್ ಸಲಹೆ ನೀಡಿದ್ದಾರೆ.
ಇದೇ ವೇಳೆ ಅವರು ಪಾಕಿಸ್ತಾನಕ್ಕೆ ಮೊದಲ ಆದ್ಯತೆಯನ್ನು ನೀಡುವುದೇ ತನ್ನ ಜೀವನದ ಪ್ರಮುಖ ಅಂಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಶ್ರರಫ್, ಎಲ್ಲಾ ಪಾಕಿಸ್ತಾನಿಯರು ದೇಶದ ಅಭಿವೃದ್ಧಿಗಾಗಿ ತಮ್ಮ ತಮ್ಮ ಪಾತ್ರವನ್ನು ಕರ್ತವ್ಯ ನಿಷ್ಠೆಯಿಂದ ನಿರ್ವಹಿಸಬೇಕೆಂದರು.
ಭಯೋತ್ಪಾದನೆಯನ್ನು ಬೇರಿನಿಂದಲೇ ಕಿತ್ತೊಗೆಯುವ ಅವಶ್ಯಕತೆಯಿದ್ದರಿಂದ ಇಡೀ ಅಂತಾರಾಷ್ಟ್ರೀಯ ಸಮುದಾಯವು ಒಗ್ಗಟ್ಟಾಗಿ ಎದುರಿಸುವ ಅಗತ್ಯವಿದೆ ಎಂದರು.
ಪಾಕಿಸ್ತಾನ ಒಂದು ದೇಶವಾಗಿ ಪರಿಗಣಿಸಲ್ಪಡುವಾಗ ನಾವು ಅಲ್ಲಿನ ಜನತೆಯ ಪ್ರಗತಿಯ ಬಗ್ಗೆ ಚಿಂತಿಸಬೇಕಾಗಿದ್ದು ಮತ್ತು ಜನರ ಸಮಾಜ ಕಲ್ಯಾಣಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಮೂಲಕ ಇಡೀ ಪಾಕಿಸ್ಥಾನ ಜನತೆಯ ಅಭಿವೃದ್ಧಿಯಾಗಬೇಕಿದೆ ಎಂದರು.
ಪಾಕ್ ಸರಕಾರವು ಜನರ ಜೀವ ಮತ್ತು ಸಂಪತ್ತಿನ ಸುರಕ್ಷತೆಗೆ ಅತ್ಯಂತ ಪ್ರಾಧಾನ್ಯವನ್ನು ನೀಡುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಅವರು ಇದೇ ವೇಳೆ ತಿಳಿಸಿದರು. |