ಮುಂಬೈ ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ವಿರುದ್ಧ 48ಗಂಟೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಅಧಿಕಾರಿಗಳು ಅಮೆರಿಕ ಮತ್ತು ಭಾರತಕ್ಕೆ ತಿಳಿಸಿರುವುದಾಗಿ ಅಮೆರಿಕದ ಮಾಧ್ಯಮದ ವರದಿಯೊಂದು ತಿಳಿಸಿದೆ.
ಮುಂಬೈ ದಾಳಿಯಲ್ಲಿ ಲಷ್ಕರ್ ಕೈವಾಡ ಸಾಬೀತಾಗಿರುವುದಾಗಿ ಅಮೆರಿಕದ ರಕ್ಷಣಾ ವರಿಷ್ಠರು ಶನಿವಾರ ಸ್ಪಷ್ಟಪಡಿಸಿದ್ದು, ಅದರ ಬೆನ್ನಲ್ಲೇ ಲಷ್ಕರ್ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಅಮೆರಿಕ ವಿದೇಶಾಂಗ ಸಚಿವೆ ಕಾಂಡೊಲೀಸಾ ರೈಸ್ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದರು.
ಅಲ್ಲದೇ ಲಷ್ಕರ್ ಕಮಾಂಡರ್ ಜಾಕಿರ್ ರೆಹಮಾನ್ ಲಾಕ್ವಿ ಹಾಗೂ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ನ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಸೇರಿದಂತೆ ಇಬ್ಬರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬೇಡಿಕೆ ಸಲ್ಲಿಸಿತ್ತು.
ಪಾಕ್ ನಿರಾಕಾರ: ಲಷ್ಕರ್ ವಿರುದ್ಧ 48ಗಂಟೆಯೊಳಗೆ ಕ್ರಮ ಕೈಗೊಳ್ಳುತ್ತೇವೆ ಎಂಬ ವರದಿ ಸುಳ್ಳು ಎಂದು ಪಾಕ್ ಭಾನುವಾರ ಪ್ರತಿಕ್ರಿಯಿಸಿದೆ. ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವ ಬಗ್ಗೆ ಬಲವಾದ ಸಾಕ್ಷಿ ಇಲ್ಲ ಎಂದು ಪಾಕ್ ಮಾಧ್ಯಮಗಳ ವರದಿ ತಿಳಿಸಿದೆ. |