ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿ ಪಾಕ್ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಲಷ್ಕರ್ ಎ ತೊಯ್ಬಾದ 20ಮಂದಿ ಉಗ್ರರನ್ನು ಸೆರೆ ಹಿಡಿದಿದ್ದು, ಅದರಲ್ಲಿ ಲಷ್ಕರ್ ಕಮಾಂಡರ್ ಜಾಕೀರ್ ರೆಹಮಾನ್ ಲಕ್ವಿ ಕೂಡ ಸೇರಿರುವುದಾಗಿ ಪಾಕ್ ಮಾಧ್ಯಮವೊಂದರ ವರದಿಯನ್ನು ಆರ್ಮಿ ವರಿಷ್ಠರು ಖಚಿತಪಡಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಆರ್ಮಿ ಹಾಗೂ ರಕ್ಷಣಾ ಪಡೆಗಳ ಜಂಟಿ ಕಾರ್ಯಾಚರಣೆಗಳ ಮೂಲಕ ಉಗ್ರರನ್ನು ಸೆರೆಹಿಡಿದಿರುವುದಾಗಿ ಹೇಳಿದ್ದು, ಅಲ್ಲದೇ ಪಿಒಕೆಯ ಮುಜಾಫರ್‍ಬಾದ್ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ ಅನ್ನು ಕೂಡ ಉಪಯೋಗಿಸಲಾಗಿತ್ತು ಎಂದು ತಿಳಿಸಿದೆ.
ಮುಂಬೈಯ ದಾಳಿಯಲ್ಲಿ ಭಾರತೀಯ ಪೊಲೀಸ್ ಪಡೆಗೆ ಅಜ್ಮಲ್ ಅಮಿರ್ ಇಮಾಮ್ ಸೆರೆಸಿಕ್ಕ ಏಕೈಕ ಉಗ್ರನಾಗಿದ್ದಾನೆ. ತನಿಖೆಯ ವೇಳೆಯಲ್ಲಿ ಮುಂಬೈ ದಾಳಿಯ ರೂವಾರಿ ಲಕ್ವಿ ಎಂಬುದಾಗಿ ಮಾಹಿತಿ ನೀಡಿದ್ದ.
ಆ ಹಿನ್ನೆಲೆಯಲ್ಲಿ ಮುಜಾಫರ್‌ಬಾದ್‌ನಲ್ಲಿ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಲಕ್ವಿ ಸೇರಿದಂತೆ 20ಮಂದಿ ಉಗ್ರರನ್ನು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ಡಾನ್ ಪತ್ರಿಕೆಯ ವರದಿ ತಿಳಿಸಿತ್ತು.
ಲಕ್ವಿಯನ್ನು ಭಾನುವಾರ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂಬ ಮಾಹಿತಿಯನ್ನು ಪಾಕ್ ಆರ್ಮಿ ಅಧಿಕಾರಿಗಳು ಸೋಮವಾರ ಖಚಿತಪಡಿಸಿದ್ದು, ಲಕ್ವಿಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಿರುವುದಾಗಿ ತಿಳಿಸಿದ್ದಾರೆ. |