ದಕ್ಷಿಣ ಫಿಲಿಫೈನ್ಸ್ ಪ್ರದೇಶದಲ್ಲಿ ಅಲ್-ಕೈದಾ ಸಂಘಟನೆಯೊಂದಿಗೆ ನಿಕಟ ಸಂಪರ್ಕವಿರುವ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಏರ್ಪಟ್ಟ ಘರ್ಷಣೆಯಲ್ಲಿ 24 ಸೈನಿಕರು ಬಲಿಯಾಗಿದ್ದು, 16 ಮಂದಿ ಗಾಯಾಗೊಂಡಿದ್ದಾರೆಂದು ಸೇನಾ ವರದಿ ಸೋಮವಾರ ತಿಳಿಸಿದೆ.
ದಕ್ಷಿಣ ತೀರಪ್ರದೇಶವಾದ ಬೆಸಲಿನ್ ಎಂಬಲ್ಲಿ ಅಬು ಸಯ್ಯಫ್ ಎಂಬ ಉಗ್ರಗಾಮಿ ಸಂಘಟನೆಯ ವಿರುದ್ಧ ಸೈನ್ಯವು ಬಾನುವಾರ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸೋಮವಾರ ಕೂಡ ಕಾರ್ಯಾಚರಣೆ ಮುಂದುವರಿದಿರುವುದಾಗಿ ಲೆಫ್ಟಿನೆಂಟ್ ಸ್ಟಿಫೆನಿ ಕಾಚೊ ತಿಳಿಸಿದ್ದಾರೆ.
ಅಬು ಸಯ್ಯಫ್ ಉಗ್ರಗಾಮಿ ಸಂಘಟನೆಯು ಹಲವು ಪ್ರಮುಖ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಸಂಘಟನೆಯ ನಿರ್ಮೂಲನೆಗಾಗಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆಯೆಂದು ಅವರು ಹೇಳಿದರು.
ಇಸ್ಲಾಮಿ ಭಯೋತ್ಪಾದನೆಯ ಒಂದು ಸಣ್ಣ ಉಗ್ರಗಾಮಿ ಸಂಘಟನೆಯಾದ ಅಬು ಸಯ್ಯಫ್ ಹಲವು ಪ್ರಮುಖ ಅಪಹರಣ ಮತ್ತು ಬಾಂಬ್ ದಾಳಿಯಲ್ಲಿ ಪಾಲ್ಗೊಂಡಿದ್ದು, 2004ರಲ್ಲಿ ಮಾನಿಲಾ ತೀರದಲ್ಲಿ ದೋಣಿಯಲ್ಲಿ ಸಾಗುತ್ತಿದ್ದ ವೇಳೆ ನಡೆಸಿದ ದಾಳಿಯ ಹಿಂದೆ ಈ ಸಂಘಟನೆಯ ಕೈವಾಡವಿರುವುದಾಗಿ ಸ್ಪಷ್ಟಗೊಂಡಿದೆ. ದಾಳಿಯಲ್ಲಿ 100ಕ್ಕಿಂತ ಅಧಿಕ ಜನರು ಬಲಿಯಾಗಿದ್ದರು.
|