ಉತ್ತರ ಜಪಾನ್‌ನ ಪರಮಾಣು ಇಂಧನ ಘಟಕವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದ್ದು, ಹಲವು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಆದರೆ ಘಟಕದಿಂದ ಯಾವುದೇ ವಿಕಿರಣ ಹೊರಸೂಸುತ್ತಿಲ್ಲ ಎಂದು ಘಟಕದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇಲ್ಲಿನ ಕಶಿವಾಜಾಕಿ ಕಾರಿವಾದಲ್ಲಿನ ನ್ಯೂಕ್ಲಿಯರ್ ಸಮುಚ್ಚಯದಲ್ಲಿರುವ ಘಟಕದಲ್ಲಿ ಪೈಪ್ ಅನ್ನು ವೆಲ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾದ ಬೆಂಕಿ ಕಿಡಿಯಿಂದಾಗಿ ಅಗ್ನಿ ಹೊತ್ತಿಕೊಂಡಿರುವುದಾಗಿ ಟೋಕಿಯೊ ಇಲೆಕ್ಟ್ರಿಕ್ ಪವರ್ ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ನ್ಯೂಕ್ಲಿಯರ್ ಘಟಕದಲ್ಲಿ ಬೆಂಕಿ ಹೊತ್ತಿಕೊಂಡು, ಹೊಗೆ ತುಂಬಿದ ಪರಿಣಾಮ ಕಾರ್ಮಿಕರು ಅಸ್ವಸ್ಥಗೊಂಡಿರುವುದಾಗಿ ತಿಳಿಸಿರುವ ವರದಿ, ಯಾವುದೇ ಗಂಭೀರ ತೆರನಾದ ಸಾವು-ನೋವುಗಳು ಸಂಭವಿಸಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ಬೆಂಕಿ ಹಿಡಿದ ಸ್ವಲ್ಪ ಸಮಯದಲ್ಲೇ ಅದನ್ನು ನಂದಿಸಲಾಯಿತು. ಆದರೆ ಬೆಂಕಿ ಅನಾಹುತದಿಂದಾಗಿ ಘಟಕದಿಂದ ಯಾವುದೇ ವಿಕಿರಣ ಹೊರಸೂಸುತ್ತಿಲ್ಲ ಎಂದು ಖಚಿತಪಡಿಸಿದೆ. |