ಭಾರತದಲ್ಲಿರುವ ಹಿಂದೂ ಪರ ಸಂಘಟನೆಗಳಿಗೆ ಅಮೆರಿಕದ ಹಿಂದೂ ಸಂಘಟನೆಗಳು ಆರ್ಥಿಕ ನೆರವು ನೀಡುತ್ತಿರುವುದಲ್ಲದೇ, ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಅಮೆರಿಕದ ಸಂಘಟನೆಯೊಂದು ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ವಿನಂತಿಸಿಕೊಂಡಿದೆ.
ಅಮೆರಿಕದಲ್ಲಿರುವ ಕೆಲವು ಸರಕಾರೇತರ ಸಂಸ್ಥೆಗಳು (ಎನ್‌ಜಿಒ) ಹಾಗೂ ಇನ್ನಿತರ ಸಂಘಟನೆಗಳು ಭಾರತದಲ್ಲಿರುವ ಹಿಂದೂ ಮೂಲಭೂತವಾದಿ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಒಬಾಮ ಅವರಿಗೆ ಸಿಎಜಿ(ಕೊಲೇಷನ್ ಎಗೈನೆಸ್ಟ್ ಜಿನೊಸೈಡ್) ಪತ್ರ ಬರೆದಿದ್ದು, ಆ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಅಮೆರಿಕದಲ್ಲಿನ ವಿಶ್ವಹಿಂದೂ ಪರಿಷತ್, ಇಂಡಿಯಾ ಡೆವಲಪ್‌ಮೆಂಟ್ ಮತ್ತು ರಿಲೀಫ್ ಫಂಡ್ ಹಾಗೂ ಏಕ್ಲಾ ವಿದ್ಯಾಲಯ ಸಂಸ್ಥೆಗಳು ಭಾರತದಲ್ಲಿರುವ ಮೂಲಭೂತವಾದಿ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಸಿಎಜಿ ಪತ್ರದಲ್ಲಿ ಉಲ್ಲೇಖಿಸಿದೆ.
ಭಾರತದಲ್ಲಿರುವ ಸಂಘಪರಿವಾರದ ಆರ್ಎಸ್ಎಸ್ ಮತ್ತು ವಿಎಚ್‌ಪಿ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರೂ ಕೂಡ ಅವೆರಡೂ ಸಂಘಟನೆಗಳ ತತ್ವಾದರ್ಶಗಳು ಒಂದೇಯಾಗಿದ್ದು ಆ ಸಂಘಟನೆಯೊಂದಿಗೆ ಸಂಪರ್ಕ ಇರಿಸಿಕೊಂಡಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. |