ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಗಳಲ್ಲಿ ಸೆರೆ ಹಿಡಿದ ಯಾವುದೇ ಶಂಕಿತ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಪಾಕ್ ಮಂಗಳವಾರ ತಿಳಿಸಿದ್ದು, ಅವರಿಗೆ ದೇಶದ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದೆ.
ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ವಿರುದ್ಧ ನಾವೇ ತನಿಖೆ ಕೈಗೊಳ್ಳುತ್ತೇವೆ. ಶಂಕಿತ ಉಗ್ರರ ಮೇಲಿನ ಆರೋಪ ಸಾಬೀತಾದಲ್ಲಿ ನಾವು ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ನಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಯ ಕ್ಯಾಂಪ್ ಮೇಲೆ ಪಾಕ್ ಆರ್ಮಿ ಪಡೆ ದಾಳಿ ನಡೆಸುವ ಮೂಲಕ ಲಷ್ಕರ್ ಎ ತೊಯ್ಬಾದ ಕೆಲವು ಪ್ರಮುಖ ಉಗ್ರರನ್ನು ಸೆರೆ ಹಿಡಿದಿರುವುದನ್ನು ಖುರೇಷಿ ಈ ಸಂದರ್ಭದಲ್ಲಿ ಖಚಿತಪಡಿಸಿದರು.
ಆ ನಿಟ್ಟಿನಲ್ಲಿ ನಿಷೇಧಿತ ಸಂಘಟನೆಯ ವಿರುದ್ಧದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತಷ್ಟು ಉಗ್ರರ ಬಂಧನದ ಸಾಧ್ಯತೆ ಇರುವುದಾಗಿ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. |