ಮುಂಬೈಯಲ್ಲಿ ವ್ಯವಸ್ಥಿತ ಸಂಚಿನೊಂದಿಗೆ ಆತ್ಮಾಹುತಿ ದಾಳಿ ನಡೆಸಲು ಸುಮಾರು 30ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ಆದರೆ ಇನ್ನೂ 20 ಮಂದಿಯ ಆತ್ಮಾಹುತಿ ತಂಡ ಭಾರತದಲ್ಲಿ ಇರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ವಾಣಿಜ್ಯ ನಗರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಎನ್‌ಎಸ್‌ಜಿ ಕಮಾಂಡೊ ಗುಂಡಿಗೆ ಒಂಬತ್ತು ಮಂದಿ ಉಗ್ರರು ಹತರಾಗಿದ್ದು, ಒರ್ವ ಉಗ್ರ(ಅಜ್ಮಲ್) ಮಾತ್ರ ಜೀವಂತವಾಗಿ ಪೊಲೀಸರಿಗೆ ಸೆರೆ ಸಿಕ್ಕಿದ್ದ.
ಏತನ್ಮಧ್ಯೆ ಭಾರತದಲ್ಲಿ ಇನ್ನೂ 20ಮಂದಿ ಶಂಕಿತ ಆತ್ಮಾಹುತಿ ಉಗ್ರರು ಅಡಗಿದ್ದಾರೆಂಬುದನ್ನು ನಂಬುತ್ತಿಲ್ಲ ಎಂದು ತಿಳಿಸಿರುವ ವರದಿ, ಆದರೂ ಅವರು ಇದ್ದಿರಬಹುದಾದ ಸಾಧ್ಯತೆ ಇರುವುದಾಗಿ ಮುಂಬೈನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೇವೆನ್ ಭಾರ್ತಿ ಅವರು ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್‌ನ ವೆಬ್‌ಸೈಟ್ ವರದಿಯಲ್ಲಿ ಬಹಿರಂಗಪಡಿಸಿದೆ.
ಉಳಿದ 20ಮಂದಿ ಉಗ್ರರು ಆತ್ಮಾಹುತಿ ಮಾಡಿಕೊಳ್ಳಲು ತಯಾರಿರುವುದಾಗಿಯೂ ಭಾರ್ತಿ ಅವರು ತಿಳಿಸಿದ್ದಾರೆ. ಇದು ಬಹಳಷ್ಟು ಅಪಾಯಕಾರಿಯಾದದ್ದು ಎಂದು ಅವರು ಕಳವಳ ವ್ಯಕ್ತಪಡಿಸಿರುವುದಾಗಿ ಟೈಮ್ಸ್ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ಪಾಕಿಸ್ತಾನಿ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಬಾ ಮೊತ್ತ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಆತ್ಮಾಹುತಿ ಪಡೆಯನ್ನು ರಚಿಸಿರುವ ಕುರಿತು ಮುಂಬೈ ಪೊಲೀಸರು ಬಹಿರಂಗಗೊಳಿಸಿರುವುದಾಗಿ ಹೇಳಿದೆ.
ನ.26-29ರವರೆಗೆ ಮುಂಬೈಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ತನಿಖೆ ವೇಳೆ ಬಾಯ್ಬಿಟ್ಟ ಅಂಶಗಳಿಂದ ಉಳಿದ ಉಗ್ರರ ಮಾಹಿತಿ ಲಭಿಸಿದೆ.
ಆಯ್ಕೆ ಮಾಡಿರುವ 30 ಮಂದಿಗೆ ಅತ್ಯುತ್ತಮ ದರ್ಜೆಯ ತರಬೇತಿ ನೀಡಲಾಗಿತ್ತು, ಅದರಲ್ಲಿ ಸಮುದ್ರಯಾನದ ಬಗ್ಗೆಯೂ ತರಬೇತಿ ನೀಡಲಾಗಿತ್ತು ಎಂದು ಭಾರ್ತಿ ಟೈಮ್ಸ್‌ಗೆ ವಿವರಿಸಿದ್ದಾರೆ. |