ಉಗ್ರಗಾಮಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಸಹಸಂಸ್ಥೆಯಾದ ಜಮಾತ್ ಉದ್ ದಾವಾ ಸಂಘಟನೆಯನ್ನು ನಿಷೇಧಿಸಲು ನೆರೆಯ ಚೀನಾ ಮೂರು ಬಾರಿ ವಿಫಲಗೊಳಿಸಿತ್ತು ಎಂಬ ಮತ್ತೊಂದು ಆಘಾತಕಾರಿ ಅಂಶ ಹೊರಬಿದ್ದಿದೆ.
ಜಮಾತ್ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆ ಮುಂದಾದಾಗ ಚೀನಾ ಮಧ್ಯಪ್ರವೇಶಿಸುವ ಮೂಲಕ ನಿಷೇಧದ ಪ್ರಯತ್ನವನ್ನು ವಿಫಲಗೊಳಿಸಿತ್ತು ಎಂಬ ಅಂಶವನ್ನು ಭದ್ರತಾ ಮಂಡಳಿ ಪ್ರಕಟಿಸಿದ ಸುತ್ತೋಲೆ ಬಹಿರಂಗಪಡಿಸಿದೆ.
ಕಳೆದ ವರ್ಷದ ಮೇ ತಿಂಗಳಿನಲ್ಲಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದಕ ಸಂಘಟನೆ ಮತ್ತು ವ್ಯಕ್ತಿಗಳ ಪಟ್ಟಿಗೆ ಜಮಾತ್ ಉದ್ ದಾವಾ ಸಂಘಟನೆಯ ವರಿಷ್ಠ ಹಫೀಜ್ ಮೊಹಮ್ಮದ್ ಸಯೀದ್ ಹೆಸರನ್ನು ಸೇರಿಸಲು ಎರಡು ಬಾರಿ ಯತ್ನಿಸಿದ್ದವು. ಈ ಪ್ರಯತ್ನಕ್ಕೂ ಚೀನಾ ಅಡ್ಡಗಾಲು ಹಾಕಿತ್ತು.
2006ರಲ್ಲಿಯೂ ಜಮಾತ್ ನಿಷೇಧಕ್ಕೆ ಒತ್ತಡ ಹೇರಿದಾಗಲೂ ಚೀನಾ ಮುಖ್ಯಪಾತ್ರವಹಿಸಿತ್ತು. ಇದೀಗ ಮುಂಬೈ ಉಗ್ರರ ದಾಳಿಯಲ್ಲಿ ಕೈವಾಡ ಹೊಂದಿರುವ ಜಮಾತ್ ಉದ್ ದಾವಾ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಹವಾಲು ಸಲ್ಲಿಸಿದೆ.
ಆ ನಿಟ್ಟಿನಲ್ಲಿ ಭಾರತಕ್ಕೆ ಪಾಕಿಸ್ತಾನದಂತೆ, ಚೀನಾ ಕೂಡ ಪ್ರಮುಖ ಶತ್ರುವಾಗತೊಡಗಿದ್ದು, ತೆರೆಮರೆಯಲ್ಲಿ ಪಾಕ್‌ಗೆ ಕುಮ್ಮಕ್ಕು ನೀಡುವ ಮೂಲಕ ಭಾರತವನ್ನು ಹಣಿಯುವ ಯತ್ನದಲ್ಲಿದೆ. |