ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾದ ಸಹ ಸಂಘಟನೆಯಾದ ಜಮಾತ್ ಉದ್ ದಾವಾ ಅನ್ನು ಭಯೋತ್ಪಾದಕ ಸಂಘಟನೆ ಎಂದು ವಿಶ್ವಸಂಸ್ಥೆಯ ರಕ್ಷಣಾ ಸಮಿತಿ ಗುರುವಾರ ಅಧಿಕೃತವಾಗಿ ಘೋಷಿಸುವ ಮೂಲಕ ಸಂಘಟನೆ ಮೇಲೆ ನಿಷೇಧ ಹೇರಿದೆ.
ಮುಂಬೈ ದಾಳಿಯ ಹಿಂದೆ ಪಾಕ್ ಮೂಲದ ಲಷ್ಕರ್ ಸಹ ಸಂಸ್ಥೆಯಾದ ಜಮಾತ್ ಉದ್ ದಾವಾ ಕೈವಾಡ ಸಾಬೀತಾದ ಹಿನ್ನೆಲೆಯಲ್ಲಿ ಸಂಘಟನೆ ಮೇಲೆ ನಿಷೇಧ ಹೇರುವಂತೆ ಭಾರತ ಆಗ್ರಹಿಸಿತ್ತು.
ವಾಣಿಜ್ಯ ನಗರಿ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಹಿಂದೆ ಜಮಾತ್‌ನ ನಾಲ್ಕು ಉಗ್ರರು ಶಾಮೀಲಾಗಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಯುಎನ್‌ಎಸ್‌ಸಿ ತಿಳಿಸಿದೆ.
ನ.26ರಂದು ನಡೆದ ಉಗ್ರರ ಹೇಶಾರವದಲ್ಲಿ 180ಮಂದಿ ಬಲಿಯಾಗಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಪಾಕ್ ಮೂಲದ ನಿಷೇಧಿತ ಲಷ್ಕರ್ ಸಂಘಟನೆಯ ನಾಲ್ಕು ಮಂದಿ ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾಗಿದೆ.
ಆ ನಿಟ್ಟಿನಲ್ಲಿ ಲಷ್ಕರ್ ಸಂಘಟನೆಯ ವರಿಷ್ಠ ಜಾಕೀರ್ ರೆಹಮಾನ್ ಲಕ್ವಿ, ಗುಂಪಿನ ಮುಖಂಡ ಮೊಹಮ್ಮದ್ ಸಯೀದ್, ಹಾಜಿ ಮೊಹಮ್ಮದ್ ಅಶ್ರಫ್ ಹಾಗೂ ಮಹಮೌದ್ ಮೊಹಮ್ಮದ್ ಅಹ್ಮದ್ ಬಾಹಜಿಕ್ ಸೇರಿದಂತೆ ನಾಲ್ವರನ್ನು ಭಯೋತ್ಪಾದಕರು ಎಂದು ವಿಶ್ವಸಂಸ್ಥೆ ಘೋಷಿಸಿದೆ.
ಆದರೆ ಬುಧವಾರ ಬೆಳಿಗ್ಗೆ ಜಮಾತ್ ಸಂಘಟನೆ ಮೇಲೆ ನಿಷೇಧ ಹೇರಿರುವುದಾಗಿ ಪಾಕ್ ರಾಷ್ಟ್ರೀಯ ಭದ್ರತಾ ಮಂಡಳಿಯ ಹಾರೂನ್ ಅಭಿಪ್ರಾಯ ವ್ಯಕ್ತಪಡಿಸಿದ ಕೆಲವೇ ಹೊತ್ತಿನಲ್ಲಿ, ಜಮಾತ್ ಮೇಲೆ ಸೂಕ್ತವಾದ ಸಾಕ್ಷ್ಯಾಧಾರವಿಲ್ಲದೆ ನಿಷೇಧಿಸುವುದಿಲ್ಲ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹೇಳಿಕೆ ನೀಡಿದ್ದರು.
ಉಗ್ರರ ನಿಗ್ರಹಕ್ಕೆ ಪಾಕ್ ಮುಂದಾಗಬೇಕು ಎಂದು ಅಮೆರಿಕ ತೀವ್ರ ಒತ್ತಡ ಹೇರಿತ್ತು. ಅಲ್ಲದೇ ಜಮಾತ್ ಉದ್ ದಾವಾ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅದರ ಮೇಲೆ ನಿಷೇಧ ಹೇರಬೇಕೆಂದು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿತ್ತು. |