ಪ್ರಮುಖ ಪ್ರವಾಸಿ ತಾಣವಾಗಿರುವ ಗೋವಾದ ಮೇಲೂ ಉಗ್ರರು ದಾಳಿ ನಡೆಸುವ ಗುರಿಯನ್ನಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಗೋವಾಕ್ಕೆ ತೆರಳಬಾರದು ಎಂದು ಇಸ್ರೇಲ್ ದೇಶದ ಪ್ರಜೆಗಳಿಗೆ ಮುನ್ನೆಚ್ಚರಿಕೆ ನೀಡಿದೆ.
ಭಾರತದ ಹಲವು ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಗೋವಾದ ಮೇಲೂ ಪ್ರಮುಖ ಉಗ್ರಗಾಮಿ ಸಂಘಟನೆಯಾದ ಅಲ್ ಕೈದಾ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಇತ್ತೀಚೆಗಷ್ಟೇ ಗೋವಾ ಸರಕಾರ ಬಹಿರಂಗಪಡಿಸಿತ್ತು.
ಆ ಹಿನ್ನೆಲೆಯಲ್ಲಿ ಇಸ್ರೇಲ್ ಜನರು ಹೊಸ ವರ್ಷಾಚರಣೆಗಾಗಿ ಮುಂದಿನ ಎರಡು ವಾರಗಳ ಕಾಲ ಗೋವಾಕ್ಕೆ ತೆರಳದಿರುವಂತೆ ಇಸ್ರೇಲ್ ಭಯೋತ್ಪಾದನಾ ನಿಗ್ರಹ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿವರ್ಷ 40ಸಾವಿರ ಇಸ್ರೇಲ್ ಪ್ರಜೆಗಳು ಭಾರತಕ್ಕೆ ಭೇಟಿ ನೀಡುತ್ತಾರೆ ,ಅದರಲ್ಲೂ ಮುಖ್ಯವಾಗಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಗೋವಾಕ್ಕೆ ಭೇಟಿ ನೀಡುವುದು ವಾಡಿಕೆ. ಸಮುದ್ರ ಕಿನಾರೆಗಳಲ್ಲಿ ಸಂಗೀತ ಗೋಷ್ಠಿ ಹಾಗೂ ಪೂರ್ಣ ಚಂದ್ರನ ಬೆಳಕಿನಲ್ಲಿ ಯುವ ಇಸ್ರೇಲಿಗಳು ಹಾಡಿ-ಕುಣಿಯುವುದು ಪ್ರಮುಖವಾಗಿದೆ.
ನ. 26ರಂದು ಮುಂಬೈಯ ನಾರಿಮನ್ ಹೌಸ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 6ಮಂದಿ ಇಸ್ರೇಲ್ ಪ್ರಜೆಗಳು ಸಾವನ್ನಪ್ಪಿದ್ದರು. ಆ ನಿಟ್ಟಿನಲ್ಲಿ ಗೋವಾ ಮೇಲೂ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶದ ಪ್ರಜೆಗಳು ಭೇಟಿ ನೀಡದಂತೆ ಸೂಚನೆ ನೀಡಿದೆ. |