ಗಲ್ಪ್ ಆಫ್ ಆಡೆನ್ ಪ್ರದೇಶದಲ್ಲಿ ಸೋಮಾಲಿ ಕಡಲ್ಗಳ್ಳರು ಮತ್ತೆ ಎರಡು ಯೆಮನ್ ಮೀನುಗಾರಿಕೆ ನೌಕೆಯನ್ನು ಅಪಹರಿಸಿದ್ದು, ಮೀನುಗಾರಿಕೆಗಾಗಿ ತೆರಳಿದ್ದ 22 ಮೀನುಗಾರರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆಂದು ಯೆಮೆನ್ ಆತಂರಿಕ ಸಚಿವಾಲಯಬುಧವಾರ ತಿಳಿಸಿದೆ.
ಮೀನುಗಾರಿಕಾ ನೌಕೆಯು ದಕ್ಷಿಣ ಆಡೆನ್ ಬಂದರು ನಗರದ ಹತ್ತಿರದ ಮೈಟ್ ಪ್ರದೇಶದಲ್ಲಿ ಮೀನುಗಾರಿಕೆಗಾಗಿ ತೆರಳುತ್ತಿರುವ ಸಂದರ್ಭದಲ್ಲಿ ಕಡಲ್ಗಳ್ಳರು ಹಠಾತ್ತಾಗಿ ಆಕ್ರಮಣವನ್ನು ನಡೆಸಿ ನೌಕೆಯನ್ನು ಅಪಹರಿಸಿರುವುದಾಗಿ ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಪಹರಣ ನಡೆಯುವ ವೇಳೆ ಏಳು ಮಂದಿ ಮೀನುಗಾರರು ಸಣ್ಣ ಬೋಟ್‌ವೊಂದರಲ್ಲಿ ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಆಡೆನಲ್ಲಿರುವ ಯೆಮನ್ ತೀರಪ್ರದೇಶದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ನೌಕೆಯಲ್ಲಿ ಇನ್ನುಳಿದ 22 ಯೆಮನ್ ಮೀನುಗಾರರನ್ನು ಕಡಲ್ಗಳ್ಳರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ವರದಿಯು ತಿಳಿಸಿದೆ. ಸೋಮಾಲಿ ತೀರಪ್ರದೇಶ ಮತ್ತು ಗಲ್ಫ್ ಆಫ್ ಆಡೆನ್‌ನಲ್ಲಿ ಈವರೆಗೆ ಒಟ್ಟು 60 ಅಪಹರಣ ಪ್ರಕರಣಗಳು ಮೊದಲ ಒಂಭತ್ತು ತಿಂಗಳಿನಲ್ಲಿ ದಾಖಲಾಗಿವೆ ಎಂದು ಅಂತಾರಾಷ್ಟ್ರೀಯ ನೌಕಯಾನಾ ಇಲಾಖೆಯು ವರದಿ ವಿವರಿಸಿದೆ. |