ಜಮಾತ್ ಉದ್ ದಾವಾ ಸಂಘಟನೆಯ ಮೇಲೆ ವಿಶ್ವಸಂಸ್ಥೆಯ ರಕ್ಷಣಾ ಸಮಿತಿ ನಿಷೇಧ ಹೇರಿದ್ದರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಜಮಾತ್ ವರಿಷ್ಠ ಸಯೀದ್ ತಿಳಿಸಿದ್ದಾನೆ.
ಜಮಾತ್ ಮೇಲಿನ ನಿಷೇಧ ಅಸಮರ್ಪಕವಾದದ್ದು ಎಂದಿರುವ ಸಯೀದ್, ನಿಷೇಧದ ವಿರುದ್ಧ ಜಮಾತ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದೆ. ಅಲ್ಲದೇ ನಿಷೇಧ ಹೇರಿರುವ ಬಗ್ಗೆ ಸ್ಪಷ್ಟನೆ ಹಾಗೂ ಸಾಕ್ಷ್ಯದ ಬಗ್ಗೆ ಯುಎನ್‌ಎಸ್‌ಸಿಗೆ ಪತ್ರ ಬರೆದಿರುವುದಾಗಿ ವಿವರಿಸಿದ್ದಾನೆ.
ಆ ನಿಟ್ಟಿನಲ್ಲಿ ಪಾಕ್ ಕೂಡ ಧಾರ್ಮಿಕ ಸಂಘಟನೆಯ ಮೇಲೆ ನಿಷೇಧ ಹೇರಿರುವುದು ನಿಜಕ್ಕೂ ನೋವಿನ ವಿಚಾರವಾಗಿದೆ, ಇದು ಇಸ್ಲಾಂ ಧಾರ್ಮಿಕ ಸಂಘಟನೆಯ ಮೇಲೆ ಪಾಕ್ ನಡೆಸಿದ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಮ್ಮ ಚಾರಿಟಿ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಜಮಾತ್ ಮೇಲೆ ಅಪವಾದಗಳನ್ನು ಹೊರಿಸಿ ನಿಷೇಧ ಹೇರಿರುವ ಧನಾತ್ಮಕ ಅಂಶಗಳ ಕುರಿತು ಸ್ಪಷ್ಟವಾದ ಉತ್ತರವನ್ನು ನೀಡಲಿದ್ದೇವೆ. ಅಲ್ಲದೇ ದಾಳಿಯ ಹಿಂದೆ ಜಮಾತ್ ಶಾಮೀಲು ಎಂಬ ಭಾರತದ ಆರೋಪವನ್ನು ತಾವು ಒಪ್ಪುವುದಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾನೆ.
ಇದೀಗ ವಿಶ್ವಸಂಸ್ಥೆಯ ನಿಷೇಧದ ನಂತರ ಪಾಕಿಸ್ತಾನ ಸರಕಾರ ಕೂಡ ಜಮಾತ್ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಜಮಾತ್‌ನ 19 ಕಚೇರಿಗಳಿಗೆ ಬೀಗಮುದ್ರೆ ಹಾಕಿದ್ದು, 25ಕ್ಕೂ ಅಧಿಕ ಕಚೇರಿ ನೌಕರರನ್ನು ಸೆರೆಹಿಡಿದಿದೆ.
ಜಮಾತ್ ವರಿಷ್ಠ ಹಾಫೀಜ್ ಮೊಹಮ್ಮದ್ ಸಯೀದ್‌ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಜಮಾತ್‌ನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮಟ್ಟುಗೋಲು ಹಾಕಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಹಾಫೀಜ್ ಮೊಹಮ್ಮದ್ ಸಯೀದ್, ಜಾಕೀರ್ ರೆಹಮಾನ್ ಲಕ್ವಿ, ಹಾಜಿ ಮುಹಮ್ಮದ್ ಅಶ್ರಫ್ ಹಾಗೂ ಮೊಹಮ್ಮದ್ ಬಾಹಾಜಿಕ್ , ಅಬು ಅಬ್ದುಲ್ ಅಜೀಜ್ ಖಾತೆಗಳನ್ನು ಮಟ್ಟುಗೋಲು ಹಾಕುವಂತೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈಗಾಗಲೇ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.
|