ಮೈಕೊರೆಯುವ ಚಳಿಯ ನಡುವೆಯೂ ಅಮೆರಿಕದಲ್ಲಿರುವ ಭಾರತೀಯರು, ನಗರದ ಮ್ಯಾನ್‌ಹಟ್ಟನ್ ಪ್ರದೇಶದಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿದರು.
ಮುಂಬೈ ಭಯೋತ್ಪಾದನೆ ದಾಳಿಯ ಹಿಂದಿನ ಕೈವಾಡದ ಕುರಿತು ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಾಕ್ ವಿರುದ್ಧ ಘೋಷಣೆಯನ್ನು ಕೂಗಿ, ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಉಗ್ರರು ಶಾಮೀಲಾಗಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.
ವಿಶ್ವ ಸಂಸ್ಥೆಯ ವರಿಷ್ಠ ಸಂಸ್ಥೆಯಾದ ಸುರಕ್ಷಾ ಮಂಡಳಿಯು ಪಾಕಿಸ್ತಾನವನ್ನು ಒಂದು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಕ್ರಮ ಕೈಗೊಳ್ಳುವಂತೆ ಅಮೆರಿಕದ ಭಾರತೀಯರು ವಿಶ್ವ ಸಂಸ್ಥೆಯನ್ನು ಒತ್ತಾಯಿಸಿದರು.
ಎರಡು ಗಂಟೆಗಳ ಕಾಲ ನಡೆದ ಶಾಂತಿಯುತವಾದ ಪ್ರತಿಭಟನೆಯನ್ನು ಸಾಗರೋತ್ತರದ ಬಿಜೆಪಿ ಮಿತ್ರ ಸಂಘ (ಒಯಫ್‌ಬಿಜೆಪಿ) ಪ್ರತಿಭಟನೆಯನ್ನು ಆಯೋಜಿಸಿತ್ತು.
ಇದೇ ವೇಳೆ ವಿಶ್ವ ಸಂಸ್ಥೆಯ ಸುರಕ್ಷಾ ಮಂಡಳಿಯು ಜಮಾತ್ ಉದ್ ದಾವಾ ಸಂಘಟನೆಯನ್ನು ಒಂದು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದ್ದನ್ನು ಅಮೆರಿಕದ ಭಾರತೀಯರು ಸ್ವಾಗತಿಸಿದರು. |