ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಅವರು, ಉಗ್ರ ಸಂಘಟನೆಗಳ ವಿರುದ್ಧ ಪ್ರಸ್ತುತ ಚಾಲನೆಯಲ್ಲಿರುವ ಮಿಲಿಟರಿ ಕಾರ್ಯಾಚರಣೆಯ ಸಂದರ್ಭ ಬಂಧಿಸಲಾದ ಯಾವುದೇ ವ್ಯಕ್ತಿಗಳನ್ನು ಅಥವಾ ಇತರ ಯಾವುದೇ ಪಾಕಿಸ್ತಾನಿ ಪ್ರಜೆಯನ್ನು ಭಾರತಕ್ಕೆ ಅಥವಾ ಇತರ ವಿದೇಶಿ ರಾಷ್ಟ್ರಗಳಿಗೆ ಹಸ್ತಾಂತರಿಸುವುದಿಲ್ಲ ಎಂದು ಹೇಳಿದ್ದಾರೆ" ಶಾಂತಿಯನ್ನು ಪ್ರತಿಷ್ಠಾಪಿಸುವ ನಮ್ಮ ಬಯಕೆಯನ್ನು ನಮ್ಮ ಬಲಹೀನತೆ ಎಂದು ಪರಿಗಣಿಸಬಾರದು" ಎಂದು ಅಧ್ಯಕ್ಷೀಯ ನಿವಾಸದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯೊಂದಿಗೆ ನಡೆಸಿದ ಡಿನ್ನರ್ ಮೀಟಿಂಗ್ ಅನ್ನು ಉದ್ದೇಶಿಸಿ ಮಾತನಾಡುತ್ತಾ ಜರ್ದಾರಿ ಹೇಳಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಯೂಸಫ್ ರಜಾ ಗಿಲಾನಿ ಮತ್ತು ಪಿಪಿಪಿಯ ಇತರ ಸಂಸತ್ ಸದಸ್ಯರು ಪಾಲ್ಗೊಂಡಿದ್ದರು. ಜರ್ದಾರಿ ಅವರು ಮುಂಬಯಿ ಉಗ್ರರ ದಾಳಿಯ ಹಿನ್ನಲೆಯಲ್ಲಿನ ಭದ್ರತಾ ವ್ಯವಸ್ಥೆಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು ಮತ್ತು ಯಾವುದೇ ಪಾಕಿಸ್ತಾನಿ ಪ್ರಜೆಯನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ದ ನ್ಯೂಸ್ ಡೈಲಿ ವರದಿ ಮಾಡಿದೆ.ಪ್ರಸ್ತುತ ಚಾಲನೆಯಲ್ಲಿರುವ ಉಗ್ರರ ಸಂಘಟನೆಗಳ ಮೇಲಿನ ಕಾರ್ಯಾಚರಣೆಯ ಬಗ್ಗೆ ಸಭೆಯಲ್ಲಿ ಭಾಗವಹಿಸಿದ ಸಂಸದೀಯರಿಗೆ ಜರ್ದಾರಿ ವಿವರಿಸಿದರು. ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕುದಾದಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದಾಗಿ ಮತ್ತು ಸರಕಾರ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವುದಾಗಿ ಅವರು ಹೇಳಿದ್ದಾರೆ.ಮುಂಬಯಿ ದಾಳಿಗೆ ಕುರಿತಂತೆ ಭಾರತ ಇದುವರೆಗೆ ಯಾವುದೇ 'ದೃಢ ಮತ್ತು ಸ್ಪಷ್ಟ ಸಾಕ್ಷ್ಯಾಧಾರ'ಗಳನ್ನು ಒದಗಿಸಿಲ್ಲ ಎಂದು ಜರ್ದಾರಿ ಹೇಳಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಪಾಕಿಸ್ತಾನ ತನ್ನದೇ ಶಾಸನದಂತೆ ಉಗ್ರವಾದವನ್ನು ಮಟ್ಟಹಾಕುತ್ತಿದೆ, ಮತ್ತು ಇದು ಯಾವುದೇ ಇತರ ರಾಷ್ಟ್ರಕ್ಕಾಗಿ ಅಥವಾ 'ಇತರರ ಒತ್ತಡ'ಕ್ಕೆ ಹೆದರಿ ಈ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಜರ್ದಾರಿ ಹೇಳಿದ್ದಾರೆ. |