ವಿಶ್ವಸಂಸ್ಥೆ ಜಮಾತ್-ಉದ್-ದಾವಾ ಸಂಘಟನೆಯನ್ನು ನಿಷೇಧಿಸಿದ ಮರುದಿನವೇ ಸಂಘಟನೆಯ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪಾಕಿಸ್ತಾನಿ ಅಧಿಕಾರಿಗಳು ಈಗ ಬಂಧಿಸಲ್ಪಟ್ಟ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಸಂಘಟನೆಯ ಹಿರಿಯ ಮುಖಂಡರ ನಿವಾಸದ ಬಳಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಗಾರ್ಡ್‌ಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಅಧಿಕಾರಿಗಳು, ಬಂಧಿಸಲ್ಪಟ್ಟಿದ್ದ ಲಷ್ಕರೆ ತೊಯ್ಬಾದ ಹೊರಸಂಸ್ಥೆ ಜಮಾತ್‌ನ ನಾಲ್ವರು ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದ್ದಾರೆ ಮತ್ತು ಸಂಘಟನೆಯ ಸ್ಥಳೀಯ ಮುಖಂಡ ಮೌಲಾನ ಅಬ್ದುಲ್ ಅಜೀಜ್ ಅಲ್ವಿ ಅವರ ಮನೆಯ ಬಳಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಗಾರ್ಡ್‌ಗಳನ್ನು ಸಹ ತೆರವುಗೊಳಿಸಲಾಗಿದೆ.
ಪೋಕ್ ರಾಜಧಾನಿ ಮುಜಫರಾಬಾದ್‌ನ ಉಪ ಕಮಿಷನರ್ ಚೌಧರಿ ಇಮ್ತಿಯಾಜ್, ಅಲ್ವಿ ಮನೆಯ ಸುತ್ತಲಿಂದ ಪೊಲೀಸ್ ಗಾರ್ಡ್‌ಗಳನ್ನು ಸರಿಸಲಾಗಿದೆ ಆದರೆ ಅನುಮತಿ ಇಲ್ಲದೆ ಸ್ಥಳವನ್ನು ತೊರೆಯಬಾರದಾಗಿ ಆತನಿಗೆ ಸೂಚಿಸಲಾಗಿದೆ ಎಂದು ಡಾನ್ ದಿನಪತ್ರಿಕೆಗೆ ತಿಳಿಸಿದ್ದಾರೆ.
ಪೋಕ್ ಪರೀಧಿಯಲ್ಲಿ ಜಮಾತ್ ಪರವಾಗಿ ನಾಯಕತ್ವ ವಹಿಸಿರುವ ಅಲ್ವಿಯನ್ನು ಕಾರ್ಯಾನ್ ಗ್ರಾಮದ ಆತನ ನಿವಾಸದಲ್ಲಿ ಗುರುವಾರ ರಾತ್ರಿ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು.
"ಭದ್ರತಾ ಕಾರಣಗಳಿಗಾಗಿ ಆತನನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಆತ ಈಗಲೂ ನಿಗಾವಣೆಯಲ್ಲಿದ್ದಾನೆ ಮತ್ತು ಸಂಬಂಧಿತ ಆಧಿಕಾರಿಗಳಿಗೆ ತಿಳಿಸದೆ ಆತ ಸ್ಥಳವನ್ನು ಬಿಟ್ಟು ತೆರಳುವಂತಿಲ್ಲ" ಎಂದು ಇಮ್ತಿಯಾಜ್ ಹೇಳಿದ್ದಾರೆ.
ಮುಜಫರಬಾದ್‌ನಲ್ಲಿ ಬಂಧಿಸಲ್ಪಟ್ಟಿದ್ದ ನಾಲ್ವರು ಜಮಾತ್ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಬಿಡುಗಡೆಗೆ ಅವರು ನೀಡಿದ ಕಾರಣ ಬಂಧಿತರು 'ಕೇವಲ ಸಾಧನ'ಗಳಾಗಿದ್ದರು ಎಂಬುದು. 'ಸ್ಥಳೀಯ ಅಥವಾ ಎರಡನೇ ಪಂಕ್ತಿಯ' ಜಮಾತ್ ಮುಖಂಡರನ್ನು ಬಂಧಿಸಲು ಕೇಂದ್ರೀಯ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. |